ಆನ್ಲೈನ್ ಮೂಲಕ ಲಕ್ಷಾಂತರ ರೂ. ವಂಚನೆ: ಕಾಞಂಗಾಡ್ ನಿವಾಸಿ ಸೆರೆ
ಹೊಸದುರ್ಗ: ಆನ್ಲೈನ್ ಮೂಲಕ ಲಕ್ಷಾಂತರ ರೂ. ವಂಚಿಸಿದ ಉತ್ತರ ಭಾರತದ ತಂಡದ ಕೊಂಡಿಯಾದ ಕಾಞಂಗಾಡ್ ನಿವಾಸಿಯನ್ನು ಮಟ್ಟನ್ನೂರು ಪೊಲೀಸರು ಬಂಧಿಸಿದ್ದಾರೆ. ಆರಂಗಾಡಿ ಹನೀಫ ಮಂಜಿಲ್ನ ಮುಹಮ್ಮದ್ ಹನೀಫನನ್ನು ಕೂತುಪರಂಬ ಎಸಿಪಿ ಕೆ.ವಿ. ವೇಣುಗೋಪಾಲ್ರ ನೇತೃತ್ವದಲ್ಲಿ ನಿನ್ನೆ ರಾತ್ರಿ ಕಾಞಂಗಾಡ್ನಿಂದ ಸೆರೆ ಹಿಡಿಯಲಾಗಿದೆ.
ಉತ್ತರ ಪ್ರದೇಶ, ದೆಹಲಿ ಎಂಬೆಡೆಗಳನ್ನು ಕೇಂದ್ರೀಕರಿಸಿ ನಡೆಸುವ ಆನ್ಲೈನ್ ವಂಚನೆಗಳ ಹೆಸರಲ್ಲಿ ಸೆರೆಯಾಗುವ ಮೊದಲ ಕೇರಳೀಯನಾಗಿದ್ದಾನೆ ಹನೀಫ್.
ವಳಿಯಂಬ್ರ ಪಿ.ಆರ್ನಗರದ ನಿವಾಸಿ ಸತೀಶನ್ ನೀಡಿದ ದೂರಿ ನಂತೆ ಪೊಲೀಸರು ತನಿಖೆ ನಡೆಸಿ ಹನೀಫ್ನನ್ನು ಸೆರೆ ಹಿಡಿದಿದ್ದಾರೆ. ಕಳೆದ ತಿಂಗಳ ೨೯ರಂದು ಫೋನ್ನಲ್ಲೂ, ವಾಟ್ಸಪ್ನಲ್ಲೂ ಅಪರಿಚಿತನಾದ ಓರ್ವ ಸಾಲ ಭರವಸೆ ನೀಡಿದಾಗ ಲೋನ್ ಆಪ್ನಲ್ಲಿ ಸತೀಶ ಅರ್ಜಿ ಹಾಕಿದ್ದರು. ಬಳಿಕ ಹಲವು ಬಾರಿಯಾಗಿ ಹಣ ಪಾವತಿಸಲು ತಿಳಿಸಿದ್ದು, ಇದರಂತೆ ಹಣ ಕಳುಹಿಸಿದ್ದರು. ಇದು ದೆಹಲಿಯ ಖಾತೆಯೊಂದಕ್ಕೆ ಸೇರಿದ್ದು, ಬಳಿಕ ಅದನ್ನು ಕಾಞಂಗಾಡ್ ನಿವಾಸಿಯ ಖಾತೆಗೆ ವರ್ಗಾಯಿಸಲಾಗಿದೆ. ಇದರಂತೆ ತನಿಖೆ ನಡೆಸಿದಾಗ ಕಾಞಂಗಾಡ್ ನಿವಾಸಿಯಾದ ಹನೀಫ್ನನ್ನು ಸೆರೆ ಹಿಡಿಯಲಾಗಿದೆ.