ಆರು ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಡಯಟ್ ಸಿಬ್ಬಂದಿ ಸೇವೆಯಿಂದ ವಜಾ
ಕಾಸರಗೋಡು: ವಿವಿಧ ಶಾಲೆಗಳ ವಿದ್ಯಾರ್ಥಿನಿ ಯರಿಗೆ ಲೈಂಗಿಕ ಕಿರುಕುಳ ನೀಡಿದ ಆರು ಪೋಕ್ಸೋ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿ ಈಗ ಜೈಲು ಶಿಕ್ಷೆ ಅನುಭವಿಸುತ್ತಿರುವ ಆರೋಪಿ ಮಾಯಿಪ್ಪಾಡಿ ಡಯಟ್‌ನ ಸಿಬ್ಬಂದಿ ಕೆ. ಚಂದ್ರಶೇಖರನ್‌ನನ್ನು ಆ ಸೇವೆಯಿಂದ ವಜಾಗೈಯ್ಯಲಾಗಿದೆ.
ಈತ ಈ ಹಿಂದೆ ಹಲವು ಶಾಲೆಗಳಲ್ಲಿ ಪಾರ್ಟ್ ಟೈಮ್ ಕಂಟೀಜೆಂಟ್ ನೌಕರನಾಗಿ ಸೇವೆ ಸಲ್ಲಿಸಿದ್ದನು. ಆ ಅವಧಿ ವೇಳೆ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಗಳಿಗೆ ಸಂಬಂಧಿಸಿ ಆತನಿಗೆ ಪೋಕ್ಸೋ ಕಾನೂನು ಪ್ರಕಾರ ನ್ಯಾಯಾಲಯ ಶಿಕ್ಷೆ ವಿಧಿಸಿದ್ದು, ಆತ ಈಗ ಜೈಲು ಶಿಕ್ಷೆ ಅನುಭವಿಸುತ್ತಿ ದ್ದಾನೆ. ೨೦೨೩ ಫೆಬ್ರವರಿ ೯ನ್ನು ಅನ್ವಯಗೊಳಿಸಿ ಈತನನ್ನು ಸರಕಾರಿ ಸೇವೆಯಿಂದ ವಜಾಗೈದು ಶಿಕ್ಷಣ ಉಪ ನಿರ್ದೇಶಕರ ಕಚೇರಿಯ ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್‌ರು ಈ ವಜಾ ಆದೇಶ ಹೊರಡಿಸಿದ್ದಾರೆ.
ಕಾಸರಗೋಡು ಮತ್ತು ಕುಂಬಳೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಳ್ಳಲಾದ ಪೋಕ್ಸೋ ಕಾನೂನು ಪ್ರಕಾರ ೨೦೨೦ ಜನವರಿ ೧೨ರಂದು ಆರೋಪಿ ಚಂದ್ರಶೇಖರನನ್ನು ಪೊಲೀಸರು ಬಂಧಿಸಿದ್ದರು. ಇಂತಹ ವಿವಿಧ ಪ್ರಕರಣಗಳಲ್ಲಾಗಿ ೨೦೨೩ ಫೆ. ೯, ಮಾರ್ಚ್ ೨೧, ಎಪ್ರಿಲ್ ೧೨, ಮೇ ೫ ಮತ್ತು ಡಿಸೆಂಬರ್ ೫ರಂದು ಕಾಸರಗೋಡು ಫಾಸ್ಟ್ ಟ್ರಾಕ್ ವಿಶೇಷ ನ್ಯಾಯಾಲಯ ಆತನಿಗೆ ಕಠಿಣ ಸಜೆ ಮತ್ತು ಜುಲ್ಮಾನೆ ವಿಧಿಸಿ ತೀರ್ಪು ನೀಡಿತ್ತು. ಈ ಪೈಕಿ ಒಂದು ಪ್ರಕರಣದಲ್ಲಿ ಆತನಿಗೆ ೯೩ ವರ್ಷ ಸಜೆ , ಮೂರು ಪ್ರಕರಣಗಳಲ್ಲಿ ತಲಾ ವಿವಿಧ ಸೆಕ್ಷನ್‌ಗಳಲ್ಲಾಗಿ ತಲಾ ೩೩ ವರ್ಷ ಮತ್ತು ಇತರ ಪ್ರಕರಣಗಳಲ್ಲಾಗಿ ಅನುಕ್ರಮವಾಗಿ ೨೮ ವರ್ಷ, ೧೪ ವರ್ಷದಂತೆ ಕಠಿಣ ಸಜೆ ಮತ್ತು ಐದು ವರ್ಷ ಸಾದಾ ಸಜೆ ಹಾಗೂ ಜುಲ್ಮಾನೆಯನ್ನೂ ನ್ಯಾಯಾಲಯ ವಿಧಿಸಿತ್ತು.