ಆರ್ಎಂ.ಪಿ ನೇತಾರ ಟಿ.ಪಿ. ಚಂದ್ರಶೇಖರನ್ ಕೊಲೆ ಪ್ರಕರಣ: ಆರೋಪಿಗಳಿಗೆ ಕೆಳ ನ್ಯಾಯಾಲಯ ನೀಡಿದ ಶಿಕ್ಷೆಯನ್ನು ಎತ್ತಿ ಹಿಡಿದು ಹೈಕೋರ್ಟು ತೀರ್ಪು
ಕೊಚ್ಚಿ: ಆರ್ಎಂಪಿ ನೇತಾರ ಟಿ.ಪಿ. ಚಂದ್ರಶೇಖರನ್ ಕೊಲೆ ಪ್ರಕರಣದ ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ನೀಡಿದ ಶಿಕ್ಷೆಯನ್ನು ಕೇರಳ ಹೈಕೋರ್ಟ್ ಇಂದು ಬೆಳಿಗ್ಗೆ ಖಾಯಂಗೊಳಿಸಿ ತೀರ್ಪು ನೀಡಿದೆ. ಮಾತ್ರವಲ್ಲ ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಇಬ್ಬರನ್ನು ಖುಲಾಸೆ ಗೊಳಿಸಿದ ತೀರ್ಪನ್ನು ಹೈಕೋರ್ಟ್ ರದ್ದುಪಡಿಸಿದೆ.
ಈ ಪ್ರಕರಣದ ಆರೋಪಿಗಳಾದ ಎನ್.ಸಿ. ಅನೂಪ್, ಕೀರ್ತಿ ಮಾಣಿ ಮನೋಜ್, ಕೊಡಿ ಸುನಿ, ಟಿ.ಕೆ. ರಜೀಶ್, ಮೊಹಮ್ಮದ್ ಶಾಫಿ, ಅಣ್ಣನ್ ಸಿಜಿತ್, ಕೆ. ಸಿನೋಜ್, ಕೆ.ಸಿ. ರಾಮ ಚಂದ್ರನ್, ಟ್ರೌಸರ್ ಮನೋಜ್, ಸಿಪಿಎಂ ಪಾನೂರು ಏರಿಯಾ ಸದಸ್ಯ ರಾಗಿದ್ದ ಟಿ.ಕೆ. ಕುಂಞನಂದನ್, ವಾಯಪ್ಪಡಚ್ಚಿ ರಫೀಕ್ ಎಂಬವರಿಗೆ ವಿಚಾರಣಾ ನ್ಯಾಯಾಲಯ ಈ ಹಿಂದೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇನ್ನೋ ರ್ವ ಆರೋಪಿ ಲಂಬೂ ಪ್ರದೀಪ್ ಎಂಬಾತನಿಗೆ ಮೂರು ವರ್ಷ ಕಠಿಣ ಸಜೆಯನ್ನು ೨೦೧೪ರಲ್ಲಿ ಇದೇ ನ್ಯಾಯಾ ಲಯ ವಿಧಿಸಿತ್ತು. ಶಿಕ್ಷೆಗೊಳಗಾಗಿ ಜೈಲುವಾಸ ಅನುಭ ವಿಸುತ್ತಿದ್ದ ಆರೋಪಿಗಳಲ್ಲೋರ್ವರಾದ ಪಿ.ಕೆ. ಕುಂಞನಂದನ್ ೨೦೨೦ ಜೂನ್ನಲ್ಲಿ ನಿಧನಗೊಂಡಿದ್ದರು. ಒಟ್ಟು ೩೬ ಆರೋ ಪಿಗಳು ಈ ಪ್ರಕರಣದಲ್ಲಿ ಒಳಗೊಂ ಡಿದ್ದಾರೆ. ಸಿಪಿಎಂ ನೇತಾರನಾದ ಪಿ. ಮೋಹನನ್ ಸೇರಿದಂತೆ ೨೪ ಮಂದಿ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿತ್ತು. ಶಿಕ್ಷೆಗೊಳಗಾದ ೧೨ ಮಂದಿ ತಮ್ಮ ಶಿಕ್ಷೆಯನ್ನು ರದ್ದುಪಡಿಸಬೇಕೆಂದು ಕೋರಿ ಬಳಿಕ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಅದರ ವಿರುದ್ಧ ಸಿಎಂಪಿ ನೇತಾರ ಟಿ.ಪಿ. ಚಂದ್ರಶೇಖರನ್ರ ಪತ್ನಿ ಕೆ.ಕೆ. ರಮ ಅವರು ಹೈಕೋರ್ಟ್ಗೆ ಬೇರೊಂದು ಅರ್ಜಿ ಸಲ್ಲಿಸಿದ್ದರು. ಅದನ್ನೆಲ್ಲಾ ಪರಿಶೀಲಿಸಿದ ಹೈಕೋರ್ಟ್ ವಿಚಾರಣಾ ನ್ಯಾಯಾಲಯ ನೀಡಿದ ತೀರ್ಪನ್ನು ಕೊನೆಗೆ ಎತ್ತಿ ಹಿಡಿದು ತೀರ್ಪು ನೀಡಿದೆ ಮಾತ್ರವಲ್ಲದೆ ಖುಲಾಸೆಗೊಳಿಸಲ್ಪಟ್ಟವರ ಪೈಕಿ ಇಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಿದ ಕ್ರಮವನ್ನು ರದ್ದುಪಡಿಸಿದೆ.
೨೦೧೨ ಮೇ ೪ರಂದು ಆರ್ಎಂಪಿ ನೇತಾರ ಟಿ.ಪಿ. ಚಂದ್ರಶೇಖರನ್ರನ್ನು ವಡಗರೆಗೆ ಸಮೀಪದ ವಳ್ಳಿಕ್ಕಾಡ್ ಎಂಬಲ್ಲಿ ಅಕ್ರಮಿಗಳ ತಂಡ ಬಾಂಬ್ ಎಸೆದು ಬೀಳಿಸಿದ ನಂತರ ಅವರನ್ನು ಆಕ್ರಮಿಸಿ ಕೊಲೆಗೈದಿತ್ತು.