ಆಸ್ತಿ ವಿವಾದ: ಸಹೋದರ ಪುತ್ರಿಯನ್ನು ಇರಿದ ಪ್ರಕರಣದ ಆರೋಪಿಗೆ ೪ ವರ್ಷ ಸಜೆ, ಜುಲ್ಮಾನೆ
ಕಾಸರಗೋಡು: ಕುಟುಂಬ ಆಸ್ತಿ ಪಾಲು ಮಾಡಿಕೊಡುವ ವಿಷಯದಲ್ಲಿ ಉಂಟಾದ ವಿವಾದದಿಂದ ಅಣ್ಣನ ಮಗಳನ್ನು ಚಾಕುವಿನಿಂದ ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೨)ದ ನ್ಯಾಯಾಧೀಶರಾದ ಬಿಜು ಟಿ. ಅವರು ನಾಲ್ಕು ವರ್ಷ ಸಜೆ ಮತ್ತು ೬೦,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.
ಬೇಡಡ್ಕ ಕುಂಡಂಕುಳಿ ಕಾರೊಟ್ಟಿಪ್ಪಾರದ ಲೋಹಿತಾಕ್ಷನ್ (೪೬) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ, ಆರೋಪಿ ೧೪ ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.
೨೦೧೮ ಆಗಸ್ಟ್ ೨೩ರಂದು ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಕರೋಟಿಪಾರದಲ್ಲಿ ಅಣ್ಣ ನಾರಾಯಣರ ಪುತ್ರಿ ಆದಿರ (೨೩)ಳನ್ನು ಆರೋಪಿ ಇರಿದು ಗಾಯಗೊಳಿಸಿದ್ದನೆಂದು ಆರೋಪಿಸಲಾಗಿದೆ. ಅಂದು ಬೇಡಗಂ ಪೊಲೀಸ್ ಠಾಣೆಯ ಎಸ್‌ಐ ಆಗಿದ್ದ ಟಿ. ದಾಮೋದರನ್ ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಷನ್ ಪರವಾಗಿ ಹೆಚ್ಚುವರಿ ಪಬ್ಲಿಕ್ ಪ್ಲೀಡರ್ ಜಿ. ಚಂದ್ರಮೋಹನ್ ಅವರು ನ್ಯಾಯಾಲಯದಲ್ಲಿ ವಾದಿಸಿದ್ದರು.