ಇದೇ ಪ್ರಥಮವಾಗಿ ಕೇರಳದಲ್ಲಿ ಅರಳಿದ ತಾವರೆ: ಎಡರಂಗಕ್ಕೆ ಕೇವಲ 1 ಸ್ಥಾನ; ರಾಜ್ಯದ 20 ಕ್ಷೇತ್ರಗಳಲ್ಲಿ 18ರಲ್ಲೂ ಯುಡಿಎಫ್‌ನದ್ದೇ ಅಧಿಪತ್ಯ
ತಿರುವನಂತಪುರ: ಈ ಲೋಕ ಸಭಾ ಚುನಾವಣೆಯಲ್ಲಿ ಕೇರಳದ ಒಟ್ಟು 20 ಕ್ಷೇತ್ರಗಳ ಪೈಕಿ ಯುಡಿಎಫ್ 18ರಲ್ಲೂ ಗೆದ್ದು ಸಂಪೂರ್ಣ ಅಧಿಪತ್ಯ ಸಾಧಿಸಿದೆ.
ಇನ್ನು ಕೇರಳದ ರಾಜಕೀಯ ಇತಿಹಾಸದಲ್ಲೇ ಇದೇ ಪ್ರಥಮವಾಗಿ ಬಿಜೆಪಿಯ ತಾವರೆ ಅರಳಿದ್ದು ಆ ಮೂಲಕ ಆ ಪಕ್ಷದ ದೀರ್ಘ ಕಾಲದ ನಿರೀಕ್ಷೆ ಕೊನೆಗೂ ಸಫಲಗೊಂಡಿದೆ.
ತಿಶೂರು ಲೋಕಸಭಾ ಕ್ಷೇತ್ರದಲ್ಲಿ ಎನ್ಡಿಎ (ಬಿಜೆಪಿ) ಉಮೇದ್ವಾರರಾಗಿ ಸ್ಪರ್ಧಿಸಿದ ನಟ ಸುರೇಶ್ ಗೋಪಿ 74,686 ಮತ ಗಳ ಭಾರೀ ಅಂತರದಿAದ ಗೆದ್ದು ಲೋಕಸಭೆಗೆ ಆಯ್ಕೆಗೊಂಡಿದ್ದಾರೆ. ಅವರಿಗೆ ಒಟ್ಟು 4,12,338 ಮತಗಳು ಲಭಿಸಿವೆ. ಎಡರಂಗ (ಸಿಪಿಎಂ)ದ ವಿ.ಎಸ್.ಸುನಿಲ್ ಕುಮಾರ್ಗೆ 337652 ಮತಗಳು ಲಭಿಸಿ ದ್ವಿತೀಯ ಸ್ಥಾನದಲ್ಲಿ ಅವರಿಗೆ ತೃಪ್ತಿಪಡಬೇಕಾಗಿ ಬಂದಿದೆ. ಇನ್ನು ಈ ಕ್ಷೇತ್ರದಲ್ಲಿ ಯುಡಿಎಫ್ (ಕಾಂಗ್ರೆಸ್) ಉಮೇದ್ವಾರರಾಗಿ ಸ್ಪರ್ಧಿಸಿದ ಕೆ. ಮುರಳೀಧರನ್ರಿಗೆ 3,28,124 ಮತಗಳು ಲಭಿಸಿ ಅವರು ತೃತೀಯ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ನ ಟಿ.ಎಸ್. ಪ್ರತಾಪನ್ ಗೆದ್ದಿದ್ದರು. ಈ ಸಲದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಅವರನ್ನೇ ಮತ್ತೆ ಕಣಕ್ಕಿಳಿಸಲು ಕಾಂಗ್ರೆಸ್ ಮೊದಲು ತೀರ್ಮಾನಿಸಿದ್ದರೂ ಕೊನೆಯ ಕ್ಷಣದಲ್ಲಿ ಅವರನ್ನು ಹೊರತುಪಡಿಸಿ ಕೆ. ಮುರಳೀಧರನ್ಗೆ ಟಿಕೆಟ್ ನೀಡಿತ್ತು.
ಉಳಿದಂತೆ ತಿರುವನಂತಪುರ ಲೋಕಸಭಾ ಕ್ಷೇತ್ರದಲ್ಲಿ ಮತ ಎಣಿಕೆಯಲ್ಲಿ ಕೊನೆಯ ಹಂತದಲ್ಲಿ ಯುಡಿಎಫ್ನ ಶಶಿ ತರೂರ್ 16,077 ಮತಗಳ ಅಂತರದಿAದ ಗೆದ್ದು ಸತತ ನಾಲ್ಕನೇ ಬಾರಿ ಆಯ್ಕೆಗೊಂಡಿದ್ದಾರೆ. ಇರಿಗೆ ಬಿಜೆಪಿಯ ರಾಜೀವ್ ಚಂದ್ರಶೇಖರನ್ ಅತ್ಯಂತ ನಿಕಟ ಪೈಪೋಟಿ ನೀಡಿದ್ದರೂ ರಾಜೀವ್ ಚಂದ್ರಶೇಖರನ್ರಿಗೆ ಗೆಲ್ಲಲು ಸಾಧ್ಯವಾಗಲಿಲ್ಲ. ತರೂರ್ಗೆ 3,58,155 ಮತಗಳು ಲಭಿಸಿದರೆ, ರಾಜೀವ್ ಚಂದ್ರಶೇಖರನ್ರಿಗೆ 3,42,078 ಮತ ಲಭಿಸಿದೆ. ಎಡರಂಗದ (ಸಿಪಿಐ)ಯ ಪನ್ಯನ್ ರವೀಂದ್ರನ್ರಿಗೆ 2,47,648 ಮತಗಳು ಲಭಿಸಿದೆ.
ಇನ್ನು ಮಾವೇಲಿಕ್ಕರೆ ಕ್ಷೇತ್ರದಲ್ಲಿ ಕೊಡಿಕುನ್ನಿಲ್ ಸುರೇಶ್, ಎರ್ನಾಕುಳಂ- ಹೈಬಿ ಈಡನ್, ಕಲ್ಲಿಕೋಟೆ- ಎಂ.ಕೆ. ರಾಘವನ್, ಅಟ್ಟಿಂಗಾಲ್- ಅಡೂರ್ ಪ್ರಕಾಶ್, ಆಲಪ್ಪುಳ- ಕೆ.ಸಿ. ವೇಣುಗೋಪಾಲ್, ಚಾಲಕ್ಕುಡಿ- ಬೆನ್ನಿ ಬೆಹನಾನ್, ಮಲಪ್ಪುರಂ- ಇ.ಟಿ. ಮುಹಮ್ಮದ್ ಬಶೀರ್, ವಡಗರೆ- ಶಾಫಿ ಪರಂಬಿಲ್, ಕೊಲ್ಲಂ- ಎಂ.ಕೆ. ಪ್ರೇಮಚಂದ್ರನ್, ಕೋಟಯಂ- ಫ್ರಾನ್ಸಿಸ್ ಜೋರ್ಜ್, ಪೊನ್ನಾನಿ- ಅಬ್ದುಲ್ ಸಮದ್ ಸಮದಾನಿ, ಕಣ್ಣೂರು- ಕೆ. ಸುಧಾಕರನ್, ಪತ್ತನಂತಿಟ್ಟ -ಆಂಟೋ ಆಂಟನಿ, ಇಡುಕ್ಕಿ- ಡೀನ್ ಕುರ್ಯಾರಕೋಸ್, ಪಾಲ್ಘಾಟ್- ವಿ.ಕೆ. ಶ್ರೀಕಂಠನ್, ವಯನಾಡ್- ರಾಹುಲ್ ಗಾಂಧಿ, ಕಾಸರಗೋಡು- ರಾಜ್ ಮೋಹನ್ ಉಣ್ಣಿತ್ತಾನ್. (ಎಲ್ಲರೂ ಯುಡಿಎಫ್) ಮತ್ತು ಆಲತ್ತೂರು ಲೋಕಸಭಾ ಕ್ಷೇತ್ರದಲ್ಲಿ ಎಡರಂಗ (ಸಿಪಿಎಂ)ನ ಕೆ. ರಾಧಾಕೃಷ್ಣನ್ ಗೆದ್ದಿದ್ದಾರೆ.