ಇನ್ನೂ ಮುಂದುವರಿಯುತ್ತಿರುವ ಟಿಪ್ಪರ್ ಲಾರಿ ಚಾಲಕ ಸಾವಿನ ನಿಗೂಢತೆ: ಭೇದಿಸಲು ಪೊಲೀಸರಿಂದ ತೀವ್ರ ಯತ್ನ
ಮಂಜೇಶ್ವರ: ಕಳೆದ ಬುಧವಾರ ಕಾಯರ್‌ಕಟ್ಟೆ ರಸ್ತೆ ಬದಿ ನಿಲ್ಲಿಸಿದ್ದ ಟಿಪ್ಪರ್ ಲಾರಿಯಲ್ಲಿ ಚಾಲಕ ಪೈವಳಿಕೆ ಬಾಯಾರುಪದವು ಕ್ಯಾಂಪ್ಕೋ ಬಳಿಯ ನಿವಾಸಿ ಮುಹಮ್ಮದ್ ಆಶಿಫ್ (29)ರ ಸಾವಿನ ನಿಗೂಢತೆ ಇನ್ನೂ ಮುಂದುವರಿಯುತ್ತಿದೆ. ಸಾವಿನ ನಿಗೂಢತೆಯನ್ನು ಬಯಲುಪಡಿಸಲು ಪೊಲೀಸರಿಗೆ ಇನ್ನೂ ಸಾಧ್ಯವಾಗಲಿಲ್ಲ. ಅದನ್ನು ಭೇದಿಸುವ ತೀವ್ರ ಯತ್ನದಲ್ಲಿ ಪೊಲೀಸರು ತೊಡಗಿದ್ದಾರೆ. ಮಾತ್ರವಲ್ಲ ಈ ಸಾವಿಗೆ ಸಂಬಂಧಿಸಿ ಪೊಲೀಸರು ಹಲವರಿಂದ ಮಾಹಿತಿ ಸಂಗ್ರಹ ಕೆಲಸದಲ್ಲೂ ತೊಡಗಿದ್ದಾರೆ.
ಮೊಹಮ್ಮದ್ ಆಶಿಫ್‌ನ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆಸಲಾಗಿತ್ತು. ಬೆನ್ನಿನ ಮೂಳೆ ಮುರಿತವೇ ಸಾವಿಗೆ ಕಾರಣವಾಗಿದೆ ಯೆಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ. ಬಿದ್ದ ಆಘಾತದಲ್ಲಿ ಆಶಿಫ್‌ನ ಬೆನ್ನು ಮೂಳೆ ಮುರಿತಕ್ಕೊಳಗಾಗಿರಬಹುದೇ ಅಥವಾ ಯಾರಾದರೂ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಬೆನ್ನು ಮೂಳೆ ಮುರಿತಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ. ಅದರಿಂದಾಗಿ ಈ ಸಾವಿನ ನಿಗೂಢತೆ ಇನ್ನೂ ಅದೇ ರೀತಿ ಮುಂದುವರಿ ಯುತ್ತದೆ. ಆದ್ದರಿಂದ ಅದನ್ನು ಭೇದಿಸಿ ವಾಸ್ತವತೆಯನ್ನು ಪತ್ತೆಹಚ್ಚುವ ತೀವ್ರ ಪ್ರಯತ್ನದಲ್ಲೂ ಪೊಲೀಸರು ತೊಡಗಿದ್ದಾರೆ.
ಕಳೆದ ಬುಧವಾರ ಮುಂಜಾನೆ ಆಶಿಫ್ ಟಿಪ್ಪರ್ ಲಾರಿಯೊಳಗೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಲಾರಿಯಲ್ಲಿ ರಕ್ತದ ಕಲೆಗಳು, ಬಿದಿರಿನ ಬೆತ್ತ ಕೂಡಾ ಪತ್ತೆಯಾಗಿತ್ತು.