ಇರಿತ ಪ್ರಕರಣ: ನ್ಯಾಯಾಲಯಕ್ಕೆ ಶರಣಾದ ಬಿಜೆಪಿ ಕೌನ್ಸಿಲರ್, ನ್ಯಾಯಾಂಗ ಬಂಧನ
ಕಾಸರಗೋಡು: ಕಳೆದ ಜನವರಿ ೩೧ರಂದು ಕಾಸರಗೋಡು ನೆಲ್ಲಿಕುಂಜೆ ಕಡಪುರದ ಶ್ರೀ ಕುರುಂಬಾ ಭಗವತೀ ಕ್ಷೇತ್ರ ಬಳಿ ನಿವಾಸಿ ಜಿಜು ಸುರೇಶ್ (೩೬) ನನ್ನು ಇರಿದು ಗಂಭೀರ ಗಾಯಗೊಳಿಸಿದ ಪ್ರಕರಣದ ಆರೋಪಿ, ಕಾಸರಗೋಡು ನಗರಸಭೆಯ ೩೬ನೇ ವಾರ್ಡ್‌ನ ಬಿಜೆಪಿ ಕೌನ್ಸಿಲರ್ ಅಜಿತ್ ಕುಮಾರ್ (೩೯) ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (೧)ರನ್ನು ಶರಣಾಗಿದ್ದಾನೆ. ನ್ಯಾಯಾಲಯದ ನಿರ್ದೇಶದ ಬಳಿಕ ಆತನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಇರಿತಕ್ಕೊಳ ಗಾದ ಜಿಜುಸುರೇಶ್ ನನ್ನು ಬಳಿಕ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖ ಲಿಸಿ ಚಿಕಿತ್ಸೆ ನೀಡಲಾಗಿದೆ. ಆತ ನೀಡಿದ ದೂರಿಂತೆ ಕಾಸರಗೋಡು ಪೊಲೀಸರು ಅಜಿತ್ ಕುಮಾರ್‌ನ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಸ್ಪರ ನಡೆದ ವಾಗ್ವಾದವೇ ಇರಿತಕ್ಕೆ ಕಾರಣ ವೆಂದು ಹೇಳಲಾಗುತ್ತಿದೆ. ನ್ಯಾಯಾಲಯಕ್ಕೆ ಶರಣಾದ ಆರೋಪಿಯನ್ನು ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ನ್ಯಾಯಾಂಗ ಬಂಧನದಿಂದ ತಮ್ಮ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು. ಅದಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.