ಇವಿಎಂ, ಇವಿ ಪ್ಯಾಟ್ ಚಟುವಟಿಕೆಗಳಲ್ಲಿ ಯಾವುದೇ ಆತಂಕ ಅಗತ್ಯವಿಲ್ಲ-ಜಿಲ್ಲಾಧಿಕಾರಿ
ಕಾಸರಗೋಡು: ಜಿಲ್ಲೆಯಲ್ಲಿ ಚುನಾವಣೆ ಚಟುವಟಿಕೆಗಳು ಪಾರದರ್ಶಕವಾಗಿ ನಡೆಯುತ್ತಿದೆ ಹಾಗೂ ಇವಿಎಂ, ಇವಿ ಪ್ಯಾಟ್ ಯಂತ್ರಗಳ ಚಟುವಟಿಕೆಗಳಲ್ಲಿ ಯಾವುದೇ ಆತಂಕ ಅಗತ್ಯವಿಲ್ಲವೆಂದು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಕೆ. ಇಂಬಶೇಖರ್ ನುಡಿದರು. ಕಲೆಕ್ಟ್ರೇಟ್ನ ಚೇಂಬರ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಕಾಸರಗೋಡು ಪಾರ್ಲಿಮೆಂಟ್ ಮಂಡಲದ ಎಲ್ಲಾ ಅಭ್ಯರ್ಥಿಗಳಿಗೂ, ಏಜೆಂಟರ್ಗಳಿಗೂ ಸೂಚನೆ ನೀಡಿ, ಪ್ರಕಟಣೆ ಹೊರಡಿಸಿ ಅವರ ಉಪಸ್ಥಿತಿಯಲ್ಲಿ ಕಮಿಶನಿಂಗ್ ನಡೆಸಲಾಗಿದೆ ಎಂದೂ, ಕಳೆದ ದಿನ ಓರ್ವ ಪ್ರತ್ಯೇಕ ಅಭ್ಯರ್ಥಿಯ ಸ್ಲಿಪ್ ಮಾತ್ರ ಮತದಾನ ಮಾಡದೆಯೇ ವಿವಿ ಪ್ಯಾಟ್ನಲ್ಲಿ ಬಂದಿದೆ ಎಂದು ಇತರ ಇಬ್ಬರು ಅಭ್ಯರ್ಥಿಗಳ ಏಜೆಂಟರ್ಗಳು ಆರೋಪಿಸಿದ ಹಿನ್ನೆಲೆಯಲ್ಲಿ ಆವಾಗಲೇ ಪರಿಶೀಲಿಸಿ ಆ ತಪ್ಪು ಧೋರಣೆಯನ್ನು ಪರಿಹರಿಸಲಾಗಿದೆಯೆಂದು ಅವರು ನುಡಿದರು. ಅಸಿಸ್ಟೆಂಟ್ ರಿಟರ್ನಿಂಗ್ ಆಫೀಸರ್, ಭೆಲ್ ಇಂಜಿನಿಯರ್ಗಳು ಎಂಬಿವರು ಅಭ್ಯರ್ಥಿಗಳಿಗೆ ಹಾಗೂ ಏಜೆಂಟರ್ಗಳಿಗೆ ಆವಾಗಲೇ ವಿಷಯ ತಿಳಿಸಿ ತಿಳುವಳಿಕೆ ಮೂಡಿಸಿದ್ದಾರೆ. ಶಂಕಿತ ವಿವಿ ಪ್ಯಾಟ್ನಲ್ಲಿ ಅಣಕು ಮತದಾನ ಮಾಡಿ ಸಾವಿರ ಮತಗಳನ್ನು ದಾಖಲಿಸಿದ ಬಳಿಕ ಎಣಿಕೆ ಮಾಡಿ ಖಚಿತಪಡಿಸಿ ಅಭ್ಯರ್ಥಿಯ ಏಜೆಂಟರ್ಗಳು ಪ್ರಮಾಣಪತ್ರಕ್ಕೆ ಸಹಿ ಹಾಕಿ ನೀಡಿದ್ದಾರೆ. ಅದರ ಬಳಿಕ ಮಾತ್ರವೇ ಕಮಿಶನಿಂಗ್ ಪೂರ್ತಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯಾರಿಗೂ ಕೂಡ ಜಿಲ್ಲೆಯ ಚುನಾವಣೆ ಚಟುವಟಿಕೆಗಳಲ್ಲಿ ಸಂಶಯ, ಆತಂಕ ಬೇಡವೆಂದು ಅವರು ನುಡಿದರು. ಕಮಿಶನಿಂಗ್ ನಡೆಸುವುದನ್ನು ಸಂಪೂರ್ಣವಾಗಿ ಸಿಸಿ ಟಿವಿ ಕ್ಯಾಮರಾದಲ್ಲಿ ದಾಖಲಿಸಲಾಗಿದೆ. ಅಗತ್ಯವಿದ್ದರೆ ಅದನ್ನು ಪರಿಶೀಲಿಸಬಹುದೆಂದು ಜಿಲ್ಲಾಧಿಕಾರಿ ನುಡಿದರು. ಕಮಿಶನಿಂಗ್ ಪೂರ್ತಿಯಾದ ಬಳಿಕ ಮತ ಯಂತ್ರಗಳನ್ನು ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ಮತದಾನದಂದು ಬೆಳಿಗ್ಗೆ ಅಭ್ಯರ್ಥಿಗಳ ಏಜೆಂಟರ್ಗಳ ಮುಂಭಾಗ ಅಣಕು ಮತದಾನವಾಗಿ ೫೦ ಮತ ದಾಖಲಿಸಿದ ಬಳಿಕ ಎಣಿಕೆ ಮಾಡಿ ಪರಿಶೀಲಿಸಲಾಗುವುದೆಂದು ಅವರು ತಿಳಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ೩ ಬಾರಿ ಅಣಕು ಮತದಾನ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ ಪರಿಶೀಲನಾ ಸಮಯದಲ್ಲಿ ಅಣಕು ಮತದಾನ ನಡೆಸಲಾಗಿತ್ತು. ಎರಡನೇ ಬಾರಿ ಕಮಿಶನಿಂಗ್ ಸಮಯದಲ್ಲೂ ಅಣಕು ಮತದಾನ ನಡೆಸಲಾಗಿದೆ. ಇನ್ನು ಮೂರನೇ ಬಾರಿ ಮತದಾನ ಆರಂಭಿಸುವ ಮೊದಲು ಅಣಕು ಮತದಾನ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ನುಡಿದರು.