ಉಕ್ಕಿನಡ್ಕ ಮೆಡಿಕಲ್ ಕಾಲೇಜು ಪೂರ್ಣ ರೀತಿಯಲ್ಲಿ ಸಜ್ಜುಗೊಳಿಸಲು ಸಿಪಿಐ ಧರಣಿ
ಬದಿಯಡ್ಕ: ಕಾಸರಗೋಡು ಮೆಡಿಕಲ್ ಕಾಲೇಜನ್ನು ಕೂಡಲೇ ಪೂರ್ಣರೀತಿಯಲ್ಲಿ ಕಾರ್ಯಾಚರಿಸುವಂತೆ ಮಾಡಬೇಕೆಂದು ಆಗ್ರಹಿಸಿ ಸಿಪಿಐ ಬದಿಯಡ್ಕ ಮಂಡಲ ಸಮಿತಿ ನೇತೃತ್ವದಲ್ಲಿ ಧರಣಿ ನಡೆಸಲಾಯಿತು. ಉಕ್ಕಿನಡ್ಕ ಪೇಟೆಯಲ್ಲಿ ನಡೆದ ಧರಣಿಯನ್ನು ಸಿಪಿಐ ಜಿಲ್ಲಾ ಅಸಿಸ್ಟೆಂಟ್ ಸೆಕ್ರೆಟರಿ ವಿ. ರಾಜನ್ ಉದ್ಘಾಟಿಸಿದರು.
ಜಿಲ್ಲೆಯ ಜನರ ದೀರ್ಘ ಕಾಲದ ಬೇಡಿಕೆಯಾದ ಮೆಡಿಕಲ್ ಕಾಲೇಜು ಆರಂಭಗೊಂಡರೂ ಅದು ಕೇವಲ ಒಪಿ ಸೌಕರ್ಯ ಮಾತ್ರವಿರುವ ಆಸ್ಪತ್ರೆಯಾಗಿ ಬದಲಾಗಿದೆ. ಎಡಪಕ್ಷ ಕೇರಳದಲ್ಲಿ ಆಡಳಿತ ನಡೆಸುತ್ತಿರುವಾಗ ಈ ರೀತಿಯಲ್ಲಿ ಧರಣಿ ನಡೆಸಬೇಕಾಗಿ ಬಂದಿರುವುದು ನಿರ್ಭಾಗ್ಯಕರವೆಂದು ಅವರು ನುಡಿದರು. ಎಂಡೋಸಲ್ಫಾನ್ ಸಂತ್ರಸ್ತರಿಗೆ ಸಹಿತ ಹೆಚ್ಚಿನ ಜನರಿಗೆ ಸಹಾಯಕವಾಗುವ ಈ ಮೆಡಿಕಲ್ ಕಾಲೇಜು ಈಗ ಯಾರಿಗೂ ಪ್ರಯೋಜನವಿಲ್ಲದಂತಾಗಿದೆ ಎಂದು ಅವರು ನುಡಿದರು. ಜಿಲ್ಲಾ ಕೌನ್ಸಿಲ್ ಸದಸ್ಯ ಎಂ. ಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಎಕ್ಸಿಕ್ಯೂಟಿವ್ ಸದಸ್ಯ ವಿ. ಸುರೇಶ್ ಬಾಬು, ಟಿ.ಎಂ. ಅಬ್ದುಲ್ ರಜಾಕ್, ಬಿ. ಸುಧಾಕರನ್, ಪ್ರಕಾಶನ್ ಕುಂಬ್ಡಾಜೆ, ಮ್ಯಾಥ್ಯು ತೆಂಙುಂಪಳ್ಳಿ ಮಾತನಾಡಿದರು. ಮಂಡಲ ಕಾರ್ಯದರ್ಶಿ ಕೆ. ಚಂದ್ರಶೇಖರ ಶೆಟ್ಟಿ ಸ್ವಾಗತಿಸಿದರು.