ಉದ್ಘಾಟನೆ ಸಂಜೆ: ಕಾರಡ್ಕದಲ್ಲಿ ಆರಂಭಗೊಂಡ ಗೆಜ್ಜೆಯ ಕಲರವ
ಮುಳ್ಳೇರಿಯ: ಕಾರಡ್ಕ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುತ್ತಿರುವ ಜಿಲ್ಲಾ ಶಾಲಾ ಕಲೋತ್ಸವದ ವೇದಿಕೆ ಸ್ಪರ್ಧೆಗಳು ಇಂದು ಬೆಳಿಗ್ಗೆ ಆರಂಭಗೊಂಡಿದ್ದು, ಸಂಜೆ ವಿಧಾನಸಭಾ ಸ್ಪೀಕರ್ ಎ.ಎನ್. ಶಂಸೀರ್ ಔಪಚಾರಿಕ ಉದ್ಘಾಟನೆ ನೆರವೇರಿಸುವರು. ಈಗಾಗಲೇ ವಿವಿಧ ಕಡೆಗಳಿಂದ ತಲುಪಿದವರು ಹಾಗೂ ಸ್ಥಳೀಯರು ಸೇರಿ ಕಾರಡ್ಕ ಶಾಲಾ ಪರಿಸರ ಉತ್ಸವ ಛಾಯೆಯಲ್ಲಿದ್ದು, ಇಂದಿನಿಂದ ಅದು ಇನ್ನಷ್ಟು ಪ್ರಜ್ವಲಿಸಲಿದೆ. ಇಂದು ಬೆಳಿಗ್ಗೆ ಪ್ರಧಾನ ವೇದಿಕೆಯಲ್ಲಿ ಮೋನೋ ಆಕ್ಟ್ ಆರಂಭಗೊಂಡಿತು. ಎರಡನೇ ವೇದಿಕೆಯಲ್ಲಿ ಮಾಪಿಳಪ್ಪಾಟ್ ಆರಂಭಗೊಂಡಿದ್ದು, ಬಳಿಕ ಒಪ್ಪನ ನಡೆಯಲಿದೆ. ೩ನೇ ವೇದಿಕೆಯಲ್ಲಿ ಸಂಸ್ಕೃತ ನಾಟಕ, ೪ನೇ ವೇದಿಕೆಯಲ್ಲಿ ಪರಿಚಮುಟ್ಟ್ ಕಳಿ, ೫ರಲ್ಲಿ ವಯಲಿನ್, ೬ರಲ್ಲಿ ಸಂಸ್ಕೃತ ಉಪನ್ಯಾಸ, ೭ರಲ್ಲಿ ಖುರ್‌ಆನ್ ಪಾರಾಯಣ, ೮ರಲ್ಲಿ ಅರಬಿಗಾನ, ೯ರಲ್ಲಿ ಉರ್ದು ಪದ್ಯ ಹೇಳುವುದು, ೧೦ರಲ್ಲಿ ಲಲಿತ ಗಾನ, ೧೧ರಲ್ಲಿ ಇಂಗ್ಲಿಷ್ ಪದ್ಯ ಹೇಳುವುದು, ೧೨ರಲ್ಲಿ ಹೈಯರ್ ಸೆಕೆಂಡರಿ ಪದ್ಯ ಹಾಡುವುದು, ೧೪ರಲ್ಲಿ ಪೂರಕ್ಕಳಿ ನಡೆಯಲಿದೆ.
ನಿನ್ನೆ ಸಂಜೆವರೆಗಿನ ವೇದಿಕೇತರ ಸ್ಪರ್ಧೆಯಲ್ಲಿ ೭೮ ವಿಭಾಗದ ಸ್ಪರ್ಧೆಗಳು ಕೊನೆಗೊಂಡಾಗ ಕಾಸರಗೋಡು ಉಪಜಿಲ್ಲೆ ೨೧೪ ಅಂಕ ಪಡೆದು ಪ್ರಥಮ ಸ್ಥಾನದಲ್ಲಿದೆ. ೨೦೬ ಅಂಕ ಪಡೆದ ಹೊಸದುರ್ಗ ಉಪಜಿಲ್ಲೆ ದ್ವಿತೀಯ ಸ್ಥಾನದಲ್ಲಿದ್ದು, ಕುಂಬಳೆ ೨೦೮ ಅಂಕ ಗಳಿಸಿದೆ. ಬೇಕಲ ೧೯೬, ಚೆರ್ವತ್ತೂರು ೧೯೩, ಮಂಜೇಶ್ವರ ೧೮೩, ಚಿತ್ತಾರಿಕಲ್ ೧೬೩ ಅಂಕ ಪಡೆದಿದೆ. ಶಾಲಾ ಮಟ್ಟದಲ್ಲಿ ಪೈವಳಿಕೆ ನಗರ ಶಾಲೆ ೫೩ ಅಂಕ ಪಡೆದಿದೆ. ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆ ೬೬ ಅಂಕ ಪಡೆದು ಒಂದನೇ ಸ್ಥಾನದಲ್ಲಿದೆ.