ಉದ್ಯೋಗ ಭರವಸೆಯೊಡ್ಡಿ ವಂಚನೆ: ಡಿವೈಎಫ್‌ಐ ಮಾಜಿ ನೇತಾರೆ ವಿರುದ್ಧ ಕ್ರಮಕ್ಕೆ ಬಿಜೆಪಿ ಒತ್ತಾಯ
ಮಂಜೇಶ್ವರ: ಉದ್ಯೋಗ ಭರವಸೆಯೊಡ್ಡಿ ಲಕ್ಷಾಂತರ ರೂಪಾಯಿ ವಂಚನೆ ನಡೆಸಿದ ಆರೋಪದಂತೆ ಕೇಸು ದಾಖಲಿಸಲ್ಪಟ್ಟ ಡಿವೈಎಫ್‌ಐ ಮಾಜಿ ನೇತಾರೆ ಸಚಿತಾ ರೈ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಒತ್ತಾಯಿಸಿದ್ದಾರೆ. ವಂಚನೆಯ ಹಿಂದೆ ಇರುವ ವ್ಯವಸ್ಥಿತ ಜಾಲವನ್ನು ಬಯಲಿಗೆ ತರಬೇಕು. ಅದಕ್ಕಾಗಿ ಸಮಗ್ರ ತನಿಖೆ ನಡೆಸಲು ಸರಕಾರ ಮುಂದಾಗಬೇಕೆಂದು ಆದರ್ಶ್ ಬಿ.ಎಂ. ಒತ್ತಾಯಿಸಿದ್ದಾರೆ.
ಸಚಿತಾ ರೈ ವಿರುದ್ಧ ವಂಚನೆ ಆರೋಪಗಳು ಕೇಳಿ ಬಂದಿದ್ದರೂ ಆಕೆಯ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆಯ ನಡವಳಿಕೆ ಖಂಡನೀಯ ಎಂದು ಬಿಜೆಪಿ ಮಂಜೇಶ್ವರ, ಪೈವಳಿಕೆ, ಮೀಂಜ, ವರ್ಕಾಡಿ ಪಂಚಾಯತ್ ಸಮಿತಿಗಳು ತಿಳಿಸಿವೆ. ವಂಚನೆ ನಡೆಸಿದ ಸಚಿತಾ ರೈ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬಿಜೆಪಿ ತೀವ್ರ ಪ್ರತಿಭಟನೆ ನಡೆಸಲಿದೆ ಎಂದು ಪುತ್ತಿಗೆ ಪಂಚಾಯತ್‌ನ ಬಿಜೆಪಿ ನೇತಾರ ಪದ್ಮನಾಭ ಆಚಾರ್ಯ ತಿಳಿಸಿದ್ದಾರೆ.