ಉದ್ಯೋಗ ಭರವಸೆಯೊಡ್ಡಿ ವಂಚನೆ: ಸಚಿತಾ ರೈ ವಿರುದ್ಧ ಮತ್ತೆರಡು ಕೇಸು ದಾಖಲು
ಕಾಸರಗೋಡು: ಕೇಂದ್ರ, ರಾಜ್ಯ, ಸರಕಾರಿ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸುವುದಾಗಿ ತಿಳಿಸಿ ಹಲವರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಶೇಣಿ ಬಲ್ತಕಲ್ಲ ನಿವಾಸಿ ಸಚಿತಾ ರೈ (27) ವಿರುದ್ಧ ಬದಿಯಡ್ಕ ಪೊಲೀಸರು ಮತ್ತೆರಡು ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ. ನೆಕ್ರಾಜೆ ಮಾವಿನಕಟ್ಟೆ ನಿವಾಸಿ ರಹಿಯಾನತ್ (35), ಕುಂಬ್ಡಾಜೆ ಉಬ್ರಂಗಳದ ಡಯಾನ (27) ನೀಡಿದ ದೂರಿನಂತೆ ಈ ಕೇಸು ದಾಖಲಿಸಲಾಗಿದೆ.
ಕಾಸರಗೋಡು ಸರಕಾರಿ ಶಾಲೆಯಲ್ಲಿ ಅಧ್ಯಾಪಿಕೆ ಕೆಲಸ ದೊರಕಿಸುವುದಾಗಿ ತಿಳಿಸಿ ರಹಿಯಾನತ್‌ರಿಂದ 2024 ಜನವರಿ 22ರಂದು 2ಲಕ್ಷ ರೂಪಾಯಿಗಳನ್ನು ಸಚಿತಾ ರೈ ಪಡೆದುಕೊಂಡಿರುವುದಾಗಿ ದೂರಲಾಗಿದೆ. ಅದೇ ರೀತಿ ಡಯಾನರಿಗೆ ಕೇಂದ್ರೀಯ ವಿದ್ಯಾಲಯದಲ್ಲಿ ಯುಡಿ ಕ್ಲರ್ಸ್ ಕೆಲಸ ದೊರಕಿಸುವುದಾಗಿ ಸಚಿತಾ ರೈ ಭರವಸೆ ನೀಡಿದ್ದಾಳೆನ್ನಲಾಗಿದೆ. ಈ ಭರವಸೆಯೊಡ್ಡಿ ಸಚಿತಾ ರೈ 3 ಲಕ್ಷ ರೂಪಾಯಿ ಕೇಳಿದ್ದಳು. ಆದರೆ 2024 ಜನವರಿ 9ರಂದು 1.48 ಲಕ್ಷ ರೂಪಾಯಿ ನಗದಾಗಿ ನೀಡಿರುವುದಾಗಿ ಡಯಾನ ದೂರಿನಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ವಂಚನೆ ಆರೋಪದಂತೆ ಸಚಿತಾ ರೈ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಿಸಿಕೊಳ್ಳಲಾದ ಕೇಸುಗಳ ಸಂಖ್ಯೆ 11ಕ್ಕೇರಿದೆ. ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಆರು ಕೇಸುಗಳು, ಆದೂರು, ಮೇಲ್ಪರಂಬ, ಮಂಜೇಶ್ವರ, ಕುಂಬಳೆ, ಉಪ್ಪಿನಂಗಡಿ ಠಾಣೆಗಳಲ್ಲಿ ತಲಾ ಒಂದೊಂದು ಕೇಸು ದಾಖಲಿಸಲಾಗಿದೆ.
ಇದೇ ವೇಳೆ ಸಚಿತಾ ರೈ ಇದೀಗ ತಲೆಮರೆಸಿಕೊಂಡಿರುವುದಾಗಿಯೂ , ಆಕೆಯ ಪತ್ತೆಗಾಗಿ ಶೋಧ ಮುಂದುವರಿಸಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಯನ್ನು ಸೆರೆ ಹಿಡಿಯಲು ಡಿವೈಎಸ್ಪಿ ಸುನಿಲ್ ಕುಮಾರ್ ನೇತೃತ್ವದಲ್ಲಿ ಪ್ರತ್ಯೇಕ ತನಿಖಾ ತಂಡ ಕಾರ್ಯಾಚರಣೆ ಮುಂದುವರಿಸಿದೆ.
ಯುವಮೋರ್ಛಾದಿಂದ ಇಂದು ಕುಂಬಳೆ ಠಾಣೆಗೆ ಮಾರ್ಚ್
ಕುಂಬಳೆ: ಉದ್ಯೋಗ ಭರವಸೆ ಯೊಡ್ಡಿ ಹಲವರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಪ್ರಕರಣದಲ್ಲಿ ಆರೋಪಿಯಾದ ಡಿವೈಎಫ್‌ಐ ಮಾಜಿ ನೇತಾರೆ ಸಚಿತಾ ರೈಯನ್ನು ಬಂಧಿಸದ ಪೊಲೀಸರ ಕ್ರಮವನ್ನು ವಿರೋಧಿಸಿ ಯುವಮೋರ್ಛಾ ಪ್ರತಿಭಟನೆಗೆ ಮುಂದಾಗಿದೆ. ಇದರ ಭಾಗವಾಗಿ ಯುವಮೋರ್ಛಾ ಕುಂಬಳೆ ಮಂಡಲ ಸಮಿತಿ ನೇತೃತ್ವದಲ್ಲಿ ಇಂದು ಅಪರಾಹ್ನ 3 ಗಂಟೆಗೆ ಕುಂಬಳೆ ಪೊಲೀಸ್ ಠಾಣೆಗೆ ಮಾರ್ಚ್ ನಡೆಯಲಿದೆಯೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.