ಉಪ್ಪಳದಲ್ಲಿ ಫ್ಲೈಓವರ್ ನಿರ್ಮಾಣ: ಬಸ್ ನಿಲುಗಡೆ ಹೆದ್ದಾರಿಯಲ್ಲಿ; ಪ್ರಯಾಣಿಕರಿಗೆ ಸಂಕಷ್ಟ
ಉಪ್ಪಳ: ಉಪ್ಪಳ ಪೇಟೆಯಲ್ಲಿ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಸಾರಿಗೆ ಬಸ್ಗಳು ರಸ್ತೆಯಲ್ಲಿ ನಿಲ್ಲಿಸುತ್ತಿದ್ದು, ಇದು ಪ್ರಯಾಣಿಕರಿಗೆ ಸಮಸ್ಯೆ ಉಂಟುಮಾಡುತ್ತಿರುವುದಾಗಿ ದೂರಿದ್ದಾರೆ. ಪೇಟೆಯಲ್ಲಿ ಪಂಚಾಯತ್ ಬಸ್ ನಿಲ್ದಾಣದ ಬಳಿ ಉಪ್ಪಳ ಪೇಟೆವರೆಗೆ ಫ್ಲೈಓವರ್ ಕೆಲಸ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಇದರಿಂದಾಗಿ ಮಂಗಳೂರು- ಕಾಸರಗೋಡು ಭಾಗಕ್ಕೆ ತೆರಳುವ ಕೇರಳ- ಕರ್ನಾಟಕ ಸಾರಿಗೆ ಬಸ್ಗಳು ನಿಲ್ದಾಣದೊಳಗೆ ಪ್ರವೇಶಿಸದೆ ಪ್ರಯಾಣಿಕರು ಹೆದ್ದಾರಿ ಬದಿಯಲ್ಲೇ ಇಳಿಸಿ, ಹತ್ತಿಸಿ ಸಾಗುತ್ತಿವೆ. ಇದರಿಂದ ಬಿಸಿಲಿಗೆ ರಸ್ತೆ ಮಧ್ಯೆ ಬಸ್ಗೆ ಕಾಯ ಬೇಕಾದ ಸ್ಥಿತಿ ಪ್ರಯಣಿಕರಲ್ಲಿದೆ. ವೃದ್ದರು, ಮಕ್ಕಳು, ಮಹಿಳೆಯರು ರಸ್ತೆಯಲ್ಲಿ ನಿಲ್ಲುತ್ತಿರುವುದು ಅಪಘಾತಕ್ಕೂ ಕಾರಣ ವಾಗುತ್ತಿದ್ದು, ಅಪಾಯ ಸಾಧ್ಯತೆಯೂ ಇದೆ. ಇದೇ ವೇಳೆ ಖಾಸಗಿ ಬಸ್ಗಳು ನಿಲ್ದಾಣ ಪ್ರವೇಶಿಸುತ್ತಿವೆ. ಹೆದ್ದಾರಿಯಲ್ಲಿ ಬಸ್ ನಿಲ್ದಾಣ ಪ್ರವೇಶಿಸಲು ಸೂಚನೆ ಇಲ್ಲದಿರುವುದು ಕೂಡಾ ಬಸ್ಗಳು ಹೆದ್ದಾರಿಯಲ್ಲೇ ನಿಲ್ಲಿಸಲು ಕಾರಣವೆನ್ನಲಾಗಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಬಸ್ಗಳು ನಿಲ್ದಾಣದೊಳಗೆ ಪ್ರವೇಶಿಸುವಂತೆ ವ್ಯವಸ್ಥೆ ಮಾಡಬೇಕೆಂದು ಪ್ರಯಣಿಕರು ಆಗ್ರಹಿಸಿದ್ದಾರೆ.