ಉಪ್ಪಳ ಬಸ್ ನಿಲ್ದಾಣದಲ್ಲಿ ತ್ಯಾಜ್ಯ ರಾಶಿ: ಶುಚೀಕರಣಕ್ಕೆ ಒತ್ತಾಯ
ಉಪ್ಪಳ: ಉಪ್ಪಳ ಬಸ್ ನಿಲ್ದಾಣದಲ್ಲಿ ತ್ಯಾಜ್ಯ ತುಂಬಿಕೊಂಡು ಪ್ರಯಾಣಿಕರಿಗೆ ಸಮಸ್ಯೆ ಉಂಟಾಗಿದೆ. ನಿಲ್ದಾಣದಲ್ಲಿ ವಿಶ್ರಾಂತಿಗಾಗಿ ಕುಳಿತುಕೊಳ್ಳುವ ಆಸನಗಳ ಪರಿಸರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಸಹಿತ ತುಂಬಿಕೊಂಡಿದ್ದು, ದುರ್ವಾಸನೆಯು ಉಂಟಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ನಿಲ್ದಾಣವನ್ನು ಶುಚಿಗೊಳಿಸಲು ಪಂಚಾಯತ್ ಯಾವುದೇ ಕ್ರಮ ಕೈಗೊಳ್ಳದಿರುವುದೇ ತ್ಯಾಜ್ಯ ರಾಶಿ ಈ ರೀತಿ ಕಂಡು ಬರಲು ಕಾರಣವೆಂದು ಆರೋಪಿಸಲಾಗಿದೆ. ದಿನವೂ ನೂರಾರು ಮಂದಿ ತಲುಪುವ ಈ ನಿಲ್ದಾಣದಲ್ಲಿ ಗ್ರಾಹಕರು ಅಂಗಡಿಗಳಿಂದ ಖರೀದಿಸಿದ ಆಹಾರ ಪದಾರ್ಥಗಳನ್ನು ತಿಂದು ಅದರ ಪ್ಯಾಕೆಟ್‌ಗಳನ್ನು ಅಲ್ಲೇ ಎಸೆಯುತ್ತಿದ್ದು, ಇದು ಅಲ್ಲಲ್ಲಿ ಬಿದ್ದುಕೊಂಡು ಪರಿಸರ ಮಲೀನೀಕರಣಗೊಳಿಸಿದೆ ಎಂದು ದೂರಲಾಗಿದೆ. ತ್ಯಾಜ್ಯವನ್ನು ಹಾಕಲು ಇಲ್ಲಿ ಡಸ್ಟ್‌ಬಿನ್ ಇರಿಸಿದರೆ ಉತ್ತಮವೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ನಿಲ್ದಾಣವನ್ನು ಶುಚೀಕರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.