ಉಪ್ಪಳ ಬಸ್ ನಿಲ್ದಾಣ ಪರಿಸರ ಕತ್ತಲು
ಉಪ್ಪಳ: ಮಂಗಲ್ಪಾಡಿ ಪಂಚಾ ಯತ್‌ನ ಉಪ್ಪಳ ಬಸ್ ನಿಲ್ದಾಣದಲ್ಲಿ ಬೀದಿ ದೀಪಗಳನ್ನು ಸ್ಥಾಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಬೀದಿ ದೀಪ ಉರಿಯದ ಕಾರಣ ಇಲ್ಲಿ ರಾತ್ರಿ ಸಮಯಗಳಲ್ಲಿ ಕತ್ತಲು ಆವರಿಸುತ್ತಿದೆ. ಬಸ್ ನಿಲ್ದಾಣದ ಸಮೀಪದ ಹೆದ್ದಾರಿ ಬದಿಯಲ್ಲಿದ್ದ ಬೀದಿ ದೀಪಗಳನ್ನು ರಸ್ತೆ ಅಭಿವೃದ್ಧಿ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿತ್ತು. ಆದರೆ ಆ ಬಳಿಕ ಸ್ಥಾಪಿಸದ ಕಾರಣ ಈಗ ಈ ಪ್ರದೇಶದಲ್ಲಿ ಸಂಚರಿಸಲು ಸಮಸ್ಯೆಯಾಗುತ್ತಿದೆ. ವ್ಯಾಪಾರ ಸಂಸ್ಥೆಗಳು ತೆರೆದಿರುವ ಸಮಯದ ವರೆಗೆ ಅಲ್ಪ ಬೆಳಕು ಇದ್ದರೆ ಸಂಸ್ಥೆಗಳನ್ನು ಮುಚ್ಚಿದ ಬಳಿಕ ಬಸ್ ನಿಲ್ದಾಣ ಪರಿಸರ ಸಂಪೂರ್ಣ ಕತ್ತಲಾಗುತ್ತಿದೆ. ಇದು ಕಳ್ಳರಿಗೂ ವರದಾನವಾಗಿ ಪರಿಣಮಿಸಿದೆ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ. ಶೀಘ್ರವೇ ಬೀದಿ ದೀಪ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.