ಎಂಡಿಎಂಎ ಸಾಗಾಟ: ಜಿಲ್ಲೆಯ ಇಬ್ಬರು ಸಹಿತ ಮೂವರು ಮತ್ತೆ ಮಂಗಳೂರಿನಲ್ಲಿ ಸೆರೆ
ತಲಪಾಡಿ: ಬೆಂಗಳೂರಿನಿಂದ ಮಂಗಳೂರಿಗೆ ಕಾರಿನಲ್ಲಿ ನಿಷೇಧಿತ ಮಾದಕ ಪದಾರ್ಥ ಎಂಡಿಎಂಎಯನ್ನು ಸಾಗಿಸುತ್ತಿದ್ದ ಮಧ್ಯೆ ಜಿಲ್ಲೆಯ ಇಬ್ಬರ ಸಹಿತ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದಾರೆ. ಅಡೂರು ದೇಲಂಪಾಡಿ ದೇವರಡ್ಕ ನಿವಾಸಿ ಮೊಹಮ್ಮದ್ ನಿಶಾದ್ (27), ಕಳನಾಡು ಚಂದ್ರಗಿರಿ ಕೀಯೂರ್ ಹೌಸ್ ನಿವಾಸಿ ಶಾಜಹಾನ್ ಪಿ.ಎಂ(32), ಮಡಿಕೇರಿ ಅಬ್ಬಿಪಾಲ್ಸ್ ಬಳಿಯ ನಿವಾಸಿ ಮನ್ಸೂರ್ ಎಂ.ಎಂ.(27) ಬಂಧಿತರಾದ ಆರೋಪಿಗಳು.
ಬೆಂಗಳೂರಿನಿಂದ ಖರೀದಿಸಿ ಕಾರಿನಲ್ಲಿ ಮಂಗಳೂರಿನತ್ತ ಆಗಮಿಸುತ್ತಿದ್ದಾಗ ಸುರತ್ಕಲ್ ಎನ್ಐಟಿಕೆ ಮುಕ್ಕ ಪರಿಸರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇವರನ್ನು ಬಂಧಿಸಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳಿಗೆ ವಿತರಿಸುತ್ತಿದ್ದ ಮಧ್ಯೆ ಖಚಿತ ಮಾಹಿತಿ ಲಭಿಸಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ಬಂಧಿತರಿಂದ 2.10 ಲಕ್ಷ ರೂ. ಮೌಲ್ಯದ 42 ಗ್ರಾಂ ಎಂಡಿಎಂಎ, 5 ಮೊಬೈಲ್ ಫೋನ್, ಕಾರು, ಡಿಜಿಟಲ್ ತೂಕ ಮಾಪಕವನ್ನು ವಶಪಡಿಸಿದ್ದಾರೆ. ಇದೆಲ್ಲವುಗಳ ಒಟ್ಟು ಮೌಲ್ಯ 12.18 ಲಕ್ಷ ರೂ. ಎಂದು ಪೊಲೀಸರು ಅಂದಾಜಿಸಿದ್ದಾರೆ. ಮಾದಕ ವಸ್ತು ಮಾರಾಟ, ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಇವರ ಪತ್ತೆಗಾಗಿ ಪೊಲೀಸರು ಕ್ರಮ ಆರಂಭಿಸಿ ದ್ದಾರೆ. ಆರೋಪಿ ಶಾಜಹಾನ್ ವಿರುದ್ಧ ಮೇಲ್ಪರಂಬ, ಬೊಕಲ, ವಿದ್ಯಾನಗರ, ಕುಂಬಳೆ, ಕಾಸರಗೋಡು ಠಾಣೆಗಳಲ್ಲಿ ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 7 ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.