ಎಂಡೋಸಲ್ಫಾನ್ ಬಾವಿಗೆ ಸುರಿದು ಮುಚ್ಚಿದ ಘಟನೆ: ರಾಷ್ಟ್ರೀಯ ಹಸಿರು ಟ್ರಿಬ್ಯೂನಲ್‌ನಿಂದ ನೋಟೀಸು; ಕೇಂದ್ರ ತಂಡ ನಾಳೆ ಮಿಂಚಿಪದವಿಗೆ
ಮುಳ್ಳೇರಿಯ: ಕಾರಡ್ಕ ಪಂಚಾಯತ್‌ನ ಮಿಂಚಿಪದವಿನಲ್ಲಿ ಮಾರಕವಾದ ಎಂಡೋಸಲ್ಫಾನ್ ವಿಷವನ್ನು ಪಾಳುಬಾವಿಗೆ ಸುರಿದು ಮುಚ್ಚಿದ ಘಟನೆಗೆ ಸಂಬಂಧಿಸಿ ರಾಷ್ಟ್ರೀಯ ಹಸಿರು ಟ್ರಿಬ್ಯೂನಲ್ ನೋಟೀಸು ಜ್ಯಾರಿಗೊಳಿಸಿದೆ. ಕೇರಳ, ಕರ್ನಾಟಕ ಸರಕಾರಗಳಿಗೆ, ಕೇಂದ್ರ-ರಾಜ್ಯ ಮಲಿನೀಕರಣ ನಿಯಂತ್ರಣ ಮಂಡಳಿಗಳಿಗೆ ಹಾಗೂ ಪ್ಲಾಂಟೇಶನ್ ಕಾರ್ಪರೇಶನ್ ಆಫ್ ಕೇರಳಕ್ಕೆ ರಾಷ್ಟ್ರೀಯ ಹಸಿರು ಟ್ರಿಬ್ಯೂನಲ್ ನೋಟೀಸು ಕಳುಹಿಸಿದೆ. ಇದರ ಆಧಾರದಲ್ಲಿ ಕೇಂದ್ರ ಸರಕಾರದ ಪ್ರತಿನಿಧಿಗಳ ತಂಡ ನಾಳೆ ಮಿಂಚಿಪದವಿಗೆ ಭೇಟಿ ನೀಡಲಿದೆ. ಉಡುಪಿ ಕೇಂದ್ರವಾಗಿರುವ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಫೌಂಡೇಶನ್ ಅಧ್ಯಕ್ಷ ರವೀಂದ್ರನಾಥ್ ಶಾನುಭಾಗ್ ಎಂಬವರು ಎಂಡೋಸಲ್ಫಾನ್ ಬಾವಿಗೆಸುರಿದ ಘಟನೆಯಲ್ಲಿ ಕ್ರಮಕ್ಕಾಗಿ ಆಗ್ರಹಪಟ್ಟು ರಾಷ್ಟ್ರೀಯ ಹಸಿರು ಟ್ರಿಬ್ಯೂನಲ್‌ನ ಚೆನ್ನೈ ಪೀಠವನ್ನು ಸಮೀಪಿಸಿದ್ದರು.
ಪ್ಲಾಂಟೇಶನ್ ಕಾರ್ಪರೇಶನ್‌ನ ಮಾಲಕತ್ವದಲ್ಲಿರುವ ತೋಟ ಪ್ರದೇಶದೊಳಗೆ ಎಂಡೋಸಲ್ಫಾನ್ ಅವಶಿಷ್ಟಗಳನ್ನು ಸುರಿದಿರುವುದು ಭೂಗರ್ಭ ಜಲವನ್ನು ಮಲಿನಗೊಳಿಸಿ ದೆಯೆಂದು ದೂರಲಾಗಿದೆ.
೨೦೧೩ ಜೂನ್‌ನಲ್ಲಿ ಉಪಯೋಗಿಸದ ಎಂಡೋಸಲ್ಫಾನ್ ಕಂಟೈನರ್‌ಗಳನ್ನು ಬಾವಿಯಲ್ಲಿ ತುಂಬಿಸಿ ಮುಚ್ಚಲಾಗಿದೆಯೆಂದು ವೇರ್ ಹೌಸ್‌ನ ಸೆಕ್ಯೂರಿಟಿ ನೌಕರ ಬಹಿರಂಗಪಡಿಸಿದ್ದರು.