ಎಡನೀರು ಮಠಕ್ಕೆ ಮಾಜಿ ಸಂಸದ ನಳಿನ್ ಕುಮಾರ್ ಭೇಟಿ
ಎಡನೀರು: ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಒಂದಾದ ಎಡನೀರು ಮಠದ ಪೀಠಾಧಿಪತಿ ಯಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ವಾಹನವನ್ನು ಕಿಡಿಗೇಡಿಗಳು ಹಾನಿಗೊಳಿಸಿದ ಘಟನೆಯನ್ನು ದಕ್ಷಿಣಕನ್ನಡ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಖಂಡಿಸಿದರು.
ಎಡನೀರು ಮಠಕ್ಕೆ ನಿನ್ನೆ ಭೇಟಿ ನೀಡಿ ಶ್ರೀಗಳಲ್ಲಿ ಮಾತುಕತೆ ನಡೆಸಿ ಆಶೀರ್ವಾದ ಪಡೆದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕಳವು, ದುಷ್ಕೃತ್ಯ, ಮತಾಂಧ ಶಕ್ತಿಗಳ ಷಡ್ಯಂತ್ರ ಇತ್ಯಾದಿಗಳು ಹೆಚ್ಚುತ್ತಿದ್ದು, ಕೇರಳದ ಪಿಣರಾಯಿ ವಿಜಯನ್ ಸರಕಾರವು ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ದುಷ್ಟ ಶಕ್ತಿಗಳು ಇನ್ನಷ್ಟು ಸಂಚು ರೂಪಿಸಿ ಸಮಾಜದಲ್ಲಿ ಶಾಂತಿ ನೆಮ್ಮದಿಯನ್ನು ಕದಡುವ ಸಾಧ್ಯತೆಯಿದೆಯೆಂದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ಶ್ರೀಕಾಂತ್, ಎಂ. ಸುಧಾಮ ಗೋಸಾಡ, ಭಜರಂಗದಳದ ಮುಖಂಡ ಮುರಳೀಕೃಷ್ಣ ಹಂಸತ್ತಡ್ಕ, ಸುನಿಲ್ ಪಿ.ಆರ್, ರಮೇಶ ಮಾವಿನಕಟ್ಟೆ, ಹರೀಶ ಗೋಸಾಡ, ಕೃಷ್ಣ ಶರ್ಮ ಏತಡ್ಕ ಹಾಗೂ ಬಿಜೆಪಿ ದಕ್ಷಿಣಕನ್ನಡ ಜಿಲ್ಲಾ ಪ್ರಮುಖರು ಜೊತೆಗಿದ್ದರು.