ಎಡನೀರು ವಿಷ್ಣುಮಂಗಲ ಕ್ಷೇತ್ರದಲ್ಲಿ ಕಳವು: ತನಿಖೆ ತೀವ್ರ

ಎಡನೀರು: ಎಡನೀರು ಮಠದ ಶ್ರೀ ವಿಷ್ಣುಮಂಗಲ ಕ್ಷೇತ್ರದಲ್ಲಿ ನಡೆದ ಕಳವಿಗೆ ಸಂಬಂಧಿಸಿ ವಿದ್ಯಾನಗರ ಪೊಲೀಸರು ತನಿಖೆ  ತೀವ್ರಗೊಳಿ ಸಿದ್ದಾರೆ.  ಶ್ರೀ ಕ್ಷೇತ್ರದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು   ಹುಂಡಿ ಒಡೆದು ೭೫೦೦ ರೂ. ಕಳವುಗೈದಿದ್ದಾರೆ. ಕಳೆದ ಓಣಂ ಹಬ್ಬದ ಬಳಿಕ ಈ ಹುಂಡಿಯನ್ನು ತೆರೆದಿರಲಿಲ್ಲ. ಶ್ರೀ ಕ್ಷೇತ್ರದ ಪಂಚಲೋಹದ ಬಲಿ ಬಿಂಬವನ್ನು  ಯಥಾ ಸ್ಥಾನದಿಂದ ಬದಲಾಯಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗಣಪತಿ ದೇವರ ಗುಡಿಯ ಬಾಗಿಲನ್ನು ಒಡೆಯಲಾಗಿದೆ. ದೇವಸ್ಥಾನದ ಸ್ಟೀಲ್ ಕಪಾಟಿನಲ್ಲಿರಿಸಿದ್ದ ಸಾಮಗ್ರಿಗಳೆಲ್ಲವನ್ನು ಕಳ್ಳರು ಚೆಲ್ಲಾಪಿಲ್ಲಿಗೊಳಿಸಿದ್ದಾರೆ. ಶನಿವಾರ ರಾತ್ರಿ ಕ್ಷೇತ್ರದ ಬಾಗಿಲು ಮುಚ್ಚಲಾಗಿತ್ತು. ನಿನ್ನೆ ಬೆಳಿಗ್ಗೆ ಅರ್ಚಕರು ಆಗಮಿಸಿದಾಗ ಕ್ಷೇತ್ರದಲ್ಲ್ಲಿ ಕಳವು ನಡೆದ ವಿಷಯ ಗಮನಕ್ಕೆ ಬಂದಿದೆ. ಈ ಬಗ್ಗೆ  ಅಸಿಸ್ಟೆಂಟ್ ಮೆನೇಜರ್ ವೇಣುಗೋಪಾಲ್ ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಯು.ಪಿ.ವಿಪಿನ್ ನೇತೃತ್ವದ ಪೊಲೀಸರು ಶ್ರೀ ಕ್ಷೇತ್ರಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಸ್ಥಳಕ್ಕಾಗಮಿಸಿ  ಅಗತ್ಯದ ಮಾಹಿತಿ ಸಂಗ್ರಹಿಸಿದ್ದಾರೆ. ಶ್ರೀ ಕ್ಷೇತ್ರದ ಸಿಸಿ ಟಿವಿ ಕ್ಯಾಮರಾಗಳನ್ನೂ ಪೊಲೀಸರು ಪರಿಶೀಲಿಸಿದ್ದಾರೆ.

ಜಿಲ್ಲೆಯಲ್ಲಿ ಕಳ್ಳರ ಹಾವಳಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಪೊಲೀಸರು ವಿಶೇಷ ಕೋಂಬಿಂಗ್ ನಡೆಸಿದ್ದರು. ಆ ವೇಳೆಯಲ್ಲೇ ಜಿಲ್ಲೆಯ ಹಲವೆಡೆಗಳಲ್ಲಿ ಕಳವು ನಡೆದಿದೆ.

 ಈ ಕ್ಷೇತ್ರದಲ್ಲಿ ವರ್ಷಗಳ ಹಿಂದೆಯೂ ಕಳವು ನಡೆದಿತ್ತು. ಅಂದು ಎಡನೀರು ಮಾತ್ರವಲ್ಲ ಮಧೂರು ಶ್ರೀ ಸಿದ್ದಿವಿನಾಯಕ ಕ್ಷೇತ್ರದಲ್ಲೂ ಕಳವು ನಡೆದಿತ್ತು. ಅಂದು  ಎರಡೂ ಕ್ಷೇತ್ರಗಳ ಕಳವು ನಡೆಸಿದ  ವ್ಯಕ್ತಿ ಓರ್ವನೇ ಆಗಿದ್ದನು. ಎಡನೀರು ಕ್ಷೇತ್ರದಲ್ಲಿ ಮೊನ್ನೆ ರಾತ್ರಿ ನಡೆದ ಕಳವನ್ನು ಆತನೇ ನಡೆಸಬಹುದೇ ಎಂಬ ಶಂಕೆಯಿಂದ ವಿದ್ಯಾನಗರ ಪೊಲೀಸ್  ಇನ್‌ಸ್ಪೆಕ್ಟರ್ ಯು.ಪಿ. ವಿಪಿನ್ ನೇತೃತ್ವದ ಪೊಲೀಸರು ಆತನ ಮನೆಗೂ ದಾಳಿ ನಡೆಸಿದ್ದರು. ಆ ವೇಳೆ ಆತ ಮನೆಯಲ್ಲಿರಲಿಲ್ಲವೆಂದು ಪೊಲೀಸರು ತಿಳಿಸಿದ್ದು ತನಿಖೆ ಇನ್ನೂ ಮುಂದುವರಿಯುತ್ತಿದೆ.

Leave a Reply

Your email address will not be published. Required fields are marked *

You cannot copy content of this page