ಎನ್‌ಡಿಎ ಅಭ್ಯರ್ಥಿ ಅಶ್ವಿನಿಯರ ಚುನಾವಣಾ ಪ್ರಚಾರ ಸಭಗೆ ಅಡಚಣೆ
ಕಾಸರಗೋಡು: ತೃಕರಿಪುರ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಪಡನ್ನ ಕಡಪ್ಪುರದಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರ ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿಯರ ಚುನಾವಣಾ ಪ್ರಚಾರ ಸಭಗೆ ಕೆಲವು ಸಿಪಿಎಂ ಕಾರ್ಯಕರ್ತರು ಅಡZಣೆ ಸೃಷ್ಟಿಸಿರುವುದಾಗಿ ದೂರುಂಟಾಗಿದೆ.
ಅಶ್ವಿನಿಯವರು ಕಾಲಿಕಡವಿನಿಂದ ಚುನಾವಣಾ ಪ್ರಚಾರ ಆರಂಭಿಸಿ ವೆಳ್ಳಚ್ಚಾಲ್, ಕರಿಪಾರತ್ತ್, ಉದಿನೂರು, ಓರಿ, ಮಾವಿಲಕಡಪುರ ಎಂಬೆಡೆಗಳಲ್ಲಿ ನಿನ್ನೆ ಪರ್ಯಟನೆ ನಡೆಸಿದ ಬಳಿಕ ಪಡನ್ನ ಕಡಪ್ಪುರಕ್ಕೆ ಆಗಮಿಸಿ ಅಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದಾಗ ಅದಕ್ಕೆ ಸಿಪಿಎಂನ ಕೆಲವರು ತಡೆಯೊಡ್ಡಿದ್ದಾರೆ. ಮಾತ್ರವಲ್ಲ ಅಭ್ಯರ್ಥಿಯನ್ನು ನಿಂದಿಸಿದರೆಂದು ಆರೋಪಿಸಲಾಗಿದೆ. ಅದರ ವಿರುದ್ಧ ಬಿಜೆಪಿ ಪ್ರತಿಭಟನೆಯಲ್ಲಿ ತೊಡಗಿದಾಗ ಚಂದೇರ ಪೊಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು. ಬಳಿಕ ಕಾರ್ಯಕ್ರಮಕ್ಕೆ ತಡೆಯೊಡ್ಡಿದವರನ್ನು ಪೊಲೀಸರು ಆ ವೇಳೆ ಬಂಧಿಸಲು ತಯಾರಾಗಲಿಲ್ಲವೆಂದೂ ದೂರಲಾಗಿದೆ. ಪೊಲೀಸರು ಅಂತಹ ಕ್ರಮವನ್ನು ಪ್ರತಿಭಟಿಸಿ ಅಭ್ಯರ್ಥಿ ಅಶ್ವಿನಿ ಮತ್ತು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ವೇಲಾಯುಧನ್‌ರ ನೇತೃತ್ವದಲ್ಲಿ ಎನ್‌ಡಿಎ ಕಾರ್ಯಕರ್ತರು ಚಂದೇರ ಪೊಲೀಸ್ ಠಾಣೆಗೆ ಆಗಮಿಸಿ ಅಲ್ಲಿ ಇನ್ನೇನು ನೆಲದಲ್ಲಿ ಕುಳಿತು ತೀವ್ರ ಪ್ರತಿಭಟನೆಯನ್ನು ಆರಂಭಿಸುವ ತಯಾರಿಯಲ್ಲಿ ತೊಡಗಿದಾಗ ಪ್ರಚಾರ ಕಾರ್ಯಕ್ರಮವನ್ನು ತಡೆದವರನ್ನು ಪೊಲೀಸರು ಕೊನೆಗೂ ಬಂಧಿಸಲು ತಯಾರಾದರು. ಪ್ರಚಾರ ಕಾರ್ಯಕ್ರಮ ತಡೆದ ಬಗ್ಗೆ ಚಂದೇರ ಪೊಲೀಸರಿಗೂ ಬಿಜೆಪಿ ದೂರು ನೀಡಿತು.