ಎನ್ಡಿಎ ಉಮೇದ್ವಾರರಾಗಿ ಅಶ್ವಿನಿ ನಾಮಪತ್ರ ಸಲ್ಲಿಕೆ
ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಎನ್ಡಿಎ ಉಮೇದ್ವಾರರಾಗಿ ಬಿಜೆಪಿಯ ಎಂ.ಎಲ್. ಅಶ್ವಿನಿಯವರು ನಿನ್ನೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ಮೊದಲು ಅಶ್ವಿನಿ ಮಧೂರು ಶ್ರೀ ಮದನಂತೇಶರ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ಪ್ರಾರ್ಥನೆ ನಡೆಸಿ ನಂತರ ವಿದ್ಯಾನಗರಕ್ಕೆ ಆಗಮಿಸಿದ ಅವರು ಎನ್ಡಿಎ ನೇತಾರರು ಮತ್ತು ಕಾರ್ಯಕರ್ತರು ಪಾಲ್ಗೊಂಡ ಮೆರವಣಿಗೆ ಮೂಲಕ ಕಲೆಕ್ಟರೇಟ್ಗೆ ಸಾಗಿ ಚುನಾವಣಾಧಿಕಾರಿಯಾ ಗಿರುವ ಜಿಲ್ಲಾಧಿಕಾರಿ ಕೆ. ಇಂಭಶೇಖರ್ರಿಗೆ ಮೂರು ಜೋಡಿ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ಅವರ ಡಮ್ಮಿ ಉಮೇದ್ವಾರರಾಗಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ವೇಲಾಯುಧನ್ ನಾಮಪತ್ರ ಸಲ್ಲಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಬಿಜೆಪಿ ವಲಯ ಪ್ರಧಾನ ಕಾರ್ಯದರ್ಶಿ ಪಿ. ಸುರೇಶ್ ಕುಮಾರ್ ಶೆಟ್ಟಿ, ಎನ್ಡಿಎ ಚುನಾವಣಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಎಂ ನಾರಾಯಣ ಭಟ್ ಈ ನಾಮಪತ್ರಗಳ ನಾಮನಿರ್ದೇ ಶಗೈದರು. ಇವರ ಹೊರತಾಗಿ ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಕೆ. ಶ್ರೀಕಾಂತ್, ಕೆ. ರಂಜಿತ್, ಬಿಜೆಪಿಯ ಇತರ ನೇತಾರರಾದ ಎಂ. ಸಂಜೀವ ಶೆಟ್ಟಿ, ಕೆ.ಕೆ. ನಾರಾಯಣನ್ ಮೊದಲಾದವರು ಆ ವೇಳೆ ಸನ್ನಿಹಿತರಾಗಿದ್ದರು.
ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವಿನಿಯವರು ಕಾಸರಗೋಡು ಲೋಕಸಭಾ ಕ್ಷೇತ್ರ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ನಾನು ಗೆದ್ದಲ್ಲಿ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಬಂದರು ಇತ್ಯಾದಿ ವಲಯಗಳೂ ಸೇರಿದಂತೆ ಇತರ ರೀತಿಯ ಹಿಂದುಳಿಯುವಿಕೆಗೆ ಪರಿಹಾರ ಕಂಡುಕೊಳ್ಳಲು ತೀವ್ರ ಯತ್ನ ನಡೆಸುವುದಾಗಿ ಅವರು ತಿಳಿಸಿದರು.