ಎರಿಯಾಲ್ ಆಬೀದ್ ಕೊಲೆ ಪ್ರಕರಣ: ಚಾರ್ಜ್ ಶೀಟ್ ಸಲ್ಲಿಕೆ
ಕಾಸರಗೋಡು: ಹದಿನಾರು ವರ್ಷಗಳ ಹಿಂದೆ ಕೂಡ್ಲಿನಲ್ಲಿ ಯುವಕನನ್ನು ಇರಿದು ಕೊಲೆಗೈದ ಪ್ರಕರಣದ ಐದು ಮಂದಿ ಆರೋಪಿಗಳ ಮೇಲಿನ ಚಾರ್ಜ್ ಶೀಟ್ (ದೋಷಾರೋಪ ಪಟ್ಟಿ)ಯನ್ನು ಕಾಸರಗೋಡು ಪೊಲೀಸರು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೩)ಕ್ಕೆ ಸಲ್ಲಿಸಿದ್ದಾರೆ.
೨೦೦೭ ನವೆಂಬರ್ ೨೦ರಂದು ಸಂಜೆ ೫.೩೦ಕ್ಕೆ ಕೂಡ್ಲು ಎರಿಯಾಲ್ ಬಳ್ಳೀರಿನಲ್ಲಿ ಕೂಡ್ಲು ಎರಿಯಾಲ್ ನಿವಾಸಿ ಆಬೀದ್ (೨೮) ಎಂಬಾತನನ್ನು ಬೈಕ್ನಲ್ಲಿ ಬಂದ ಅಕ್ರಮಿಗಳ ತಂಡ ಇರಿದು ಬರ್ಬರವಾಗಿ ಕೊಲೆಗೈದಿತ್ತು. ಇದಕ್ಕೆ ಸಂಬಂಧಿಸಿ, ಕೂಡ್ಲಿನ ಶಂಸುದ್ದೀನ್ (೪೦), ರಫೀಕ್ (೪೩), ಕೆ.ಎಂ. ರಫೀಕ್ (೪೦) ಅಬ್ದುಲ್ ಜಲೀಲ್ (೪೧) ಮತ್ತು ಪಿ.ಎಚ್. ಹ್ಯಾರಿಸ್ (೪೧) ಎಂಬವರ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ರಾಜಕೀಯ ದ್ವೇಷದಿಂದ ಅಬೀದ್ನನ್ನು ಕೊಲೆಗೈಯ್ಯಲಾಗಿತ್ತೆಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.
ಈ ಪ್ರಕರಣದ ವಿಚಾರಣೆ ಇನ್ನಷ್ಟೇ ನ್ಯಾಯಾಲಯದಲ್ಲಿ ಆರಂಭಗೊಳ್ಳಲಿದೆ. ಇದರ ಪೂರ್ವ ಕ್ರಮದಂತೆ ಸಮನ್ಸ್ ಪ್ರಕಾರ ಈ ಐವರು ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಾದರು. ಚಾರ್ಜ್ಶೀಟ್ನಲ್ಲಿ ಅವರ ವಿರುದ್ಧ ಹೊರಿಸಲಾಗಿರುವ ಆರೋಪಗಳನ್ನು ಅವರಿಗೆ ನ್ಯಾಯಾಲಯದಲ್ಲಿ ಓದಿ ತಿಳಿಸಲಾಯಿತು.