ಎಲ್‌ಪಿ ಶಾಲೆಯ ಮಾದರಿ ಕಾರ್ಯ: ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಪೇರಾಲ್ ಶಾಲೆಯಲ್ಲಿ ಇಂದಿನಿಂದ
ಕುಂಬಳೆ: ರಾಜ್ಯದ ಇತಿಹಾಸ ದಲ್ಲಿ ಪ್ರಥಮ ಬಾರಿಗೆ ಎಲ್‌ಪಿ ಶಾಲೆಯೊಂದರ ನೇತೃತ್ವದಲ್ಲಿ ಉಪಜಿಲ್ಲಾ ಕಲೋತ್ಸವ ನಡೆಯುತ್ತಿದೆ. ಈ ಸಾಧನೆಗೆ ನೇತೃತ್ವ ವಹಿಸಿರುವುದು ಕುಂಬಳೆ ಪಂ.ನ ಪೇರಾಲ್ ಎಲ್‌ಪಿ ಶಾಲೆಯಾಗಿದೆ. ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಜೆಜಿಬಿಎಸ್ ಪೇರಾಲ್ ಶಾಲೆಯಲ್ಲಿ ಇಂದಿನಿಂದ ಈ ತಿಂಗಳ ೧೮ರ ವರೆಗೆ ನಡೆಯಲಿದೆ. ಭಾರೀ ವೆಚ್ಚ ನಿರೀಕ್ಷಿಸುವ ಕಲೋತ್ಸವವನ್ನು ವಹಿಸಿಕೊಳ್ಳಲು ಹೈಸ್ಕೂಲ್‌ಗಳೇ ಹಿಂದೇಟು ಹಾಕುವಾಗ ಪೇರಾಲ್ ಶಾಲೆ ಮಾದರಿ ಸೃಷ್ಟಿಸಿದೆ.
ಕಲೋತ್ಸವವನ್ನು ೧೬ರಂದು ಶಾಸಕ ಎಕೆಎಂ ಅಶ್ರಫ್ ಔಪಚಾರಿಕವಾಗಿ ಉದ್ಘಾಟಿಸುವರು. ಸಂಸದ ರಾಜ್‌ಮೋ ಹನ್ ಉಣ್ಣಿತ್ತಾನ್ ಸಮಾರೋಪ ಸಮಾರಂಭವನ್ನು ಉದ್ಘಾಟಿಸುವರು. ಸುಮಾರು ೭೫೧೮ ಕಲಾ ಪ್ರತಿಭೆಗಳು ಭಾಗವಹಿಸುವ ಕಲೋತ್ಸವವನ್ನು ಯಶಸ್ವಿಗೊಳಿಸಲು ಸ್ವಾಗತ ಸಮಿತಿ ಯತ್ನಿಸುತ್ತಿದೆ. ಈ ಬಗ್ಗೆ ಮಾಹಿತಿ ನೀಡಲು ನಡೆಸಿದ್ದ ಸುದ್ಧಿಗೋಷ್ಠಿಯಲ್ಲಿ ಪಂ. ಅಧ್ಯಕ್ಷೆ ಯು.ಪಿ. ತಾಹಿರ ಯೂಸಫ್, ಉಪಾಧ್ಯಕ್ಷ ನಾಸರ್ ಮೊಗ್ರಾಲ್, ವಾರ್ಡ್ ಪ್ರತಿನಿಧಿ ತಾಹಿರ, ಉಪಜಿಲ್ಲಾ ಶಿಕ್ಷಣಾಧಿಕಾರಿ ಎಂ. ಶಶಿಧರ, ಎಂ.ಎ. ಶ್ವೇತಕುಮಾರ್, ಮುಖ್ಯೋಪಾಧ್ಯಾಯ ಹರ್ಷ ಎಂ.ಪಿ, ಪಿಟಿಎ ಅಧ್ಯಕ್ಷ ಮುಹಮ್ಮದ್ ಪೇರಾಲ್ ಭಾಗವಹಿಸಿದರು.