ಎಸ್‌ಐಗೆ ಕಲ್ಲು ತೂರಾಟ: ನಾಲ್ವರ ಸೆರೆ
ಕಾಸರಗೋಡು: ಬೇಕಲ ಪೊಲೀಸ್ ಠಾಣೆಯ ಎಸ್‌ಐ ಜಯಚಂದ್ರನ್‌ರ ಮೇಲೆ ಪೆರಿಯ ಆಯಂಬಾರದಲ್ಲಿ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ.
ಚಿತ್ತಾರಿ ಕೊಳವಯಲಿನ ಆರ್. ಶೈಜು (36), ಪುಲ್ಲೂರು ಕೇಕೊಳದ ಕೆ. ಸುನಿಲ್ ಕುಮಾರ್ (36), ರಾವ ಣೇಶ್ವರ ನಂಬ್ಯಾರಡ್ಕದ ಕೆ. ಮುಖೇಶ್ (36) ಮತ್ತು ಕೆ. ವಿಜು(43) ಬಂಧಿತ ಆರೋಪಿಗಳು. ಕೆಂಪುಕಲ್ಲಿನ ದರ ಏರಿಕೆ ಪ್ರತಿಭಟಿಸಿ ಲಾರಿ ಚಾಲಕರು ಕೋರೆ ಗಳಿಂದ ಕೆಂಪು ಕಲ್ಲು ಪಡೆಯುವುದನ್ನು ನಿಲ್ಲಿಸಿ ಮುಷ್ಕರದಲ್ಲಿ ತೊಡಗಿದ್ದರು.
ಆ ವೇಳೆ ಆಯಂಬಾರದ ಕೋರೆ ಮಾಲಕನೋರ್ವ ತಮ್ಮ ವಾಹನದಲ್ಲಿ ತಾವೇ ಕೆಂಪು ಕಲ್ಲು ಗಳನ್ನು ಹೇರಿ ಸಾಗಿಸಲೆತ್ನಿಸುತ್ತಿದ್ದ ವೇಳೆ ಮುಷ್ಕರ ನಿರತ ಲಾರಿ ಚಾಲಕರು ಅದನ್ನು ತಡೆದಿದ್ದರು. ಆಗ ಅಲ್ಲಿ ಘರ್ಷಣೆ ಉಂಟಾಗಿತ್ತು. ಅದನ್ನು ತಡೆಯಲು ಎಸ್‌ಐ ಜಯಚಂದ್ರನ್ ನೇತೃತ್ವದ ಪೊಲೀಸರು ಬಂದಾಗ ಎಸ್‌ಐಯ ಮೇಲೆ ಕಲ್ಲು ತೂರಾಟ ನಡೆದು ಅವರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.