ಎಸ್‌ಡಿಪಿಐ ವಿರುದ್ಧ ಸುಳ್ಳು ಪ್ರಚಾರ ನಡೆಸುವವರ ಮೇಲೆ ಕಾನೂನು ಕ್ರಮ-ಪದಾಧಿಕಾರಿಗಳು
ಕುಂಬಳೆ: ಎಸ್‌ಡಿಪಿಐ ವಿರುದ್ಧ ಸುಳ್ಳು ಪ್ರಚಾರ ನಡೆಸುವರ ವಿರುದ್ಧ ಕಾನೂನು ಕ್ರಮ ಸ್ವೀಕರಿಸುವುದಾಗಿ ಮಂಡಲ ಸಮಿತಿ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ವರ್ಕಾಡಿ ಪಂಚಾಯತ್‌ನ ಆನೆಕಲ್ಲು ನಲ್ಲಿ ಮಣ್ಣು ಗಣಿಗಾರಿಕೆಗೆ ಸಂಬಂಧಿಸಿ ಸ್ಥಳೀಯರು ಮಂಜೇಶ್ವರ ಮಂಡಲ ಸಮಿತಿಯನ್ನು ಸಂಪರ್ಕಿಸಿದ್ದರು. ಆ ಹಿನ್ನೆಲೆಯಲ್ಲಿ ಪಕ್ಷದ ಮಂಡಲ ಸಮಿತಿ ಅಧ್ಯಕ್ಷ ಅಶ್ರಫ್ ಬಡಾಜೆ ನೇತೃತ್ವದಲ್ಲಿ ಸ್ಥಳ ಸಂದರ್ಶಿಸಿ ಜನರ ಸಮಸ್ಯೆ ಎಂಬ ನೆಲೆಯಲ್ಲಿ ಅಧಿಕಾರಿಗಳ ಗಮನಕ್ಕೆ ತರಲು ಸುದ್ದಿ ಮಾಧ್ಯಮಗಳಲ್ಲಿ ವರದಿ ಪ್ರಕಟಿಸಲಾಗಿತ್ತು. ಆದರೆ ಎಸ್‌ಡಿಪಿಐ ವಿರುದ್ಧ ಮುಸ್ಲಿಂ ಲೀಗ್ ಹಾಗೂ ಇತರ ರಾಜಕೀಯ ಪಕ್ಷಗಳು ಜೊತೆಯಾಗಿ ನಿಂತು ಸುಳ್ಳು ಪ್ರಚಾರ ನಡೆಸುತ್ತಿರುವುದಾಗಿ, ನಿಷೇಧಿತ ಸಂಘಟನೆ ಹೆಸರಲ್ಲಿ ತಪ್ಪು ಧೋರಣೆ ಸೃಷ್ಟಿಸುವ ರೀತಿ ಪ್ರಚಾರ ನಡೆಸುತ್ತಿರುವುದಾಗಿ ಪದಾಧಿಕಾರಿಗಳು ಆರೋಪಿಸಿದರು. ಮಣ್ಣು ಮಾಫಿಯಾದೊಂದಿಗೆ ಸೇರಿ ಸುಳ್ಳು ಸುದ್ದಿ ಹಬ್ಬುವರ ವಿರುದ್ಧ ಜನರನ್ನು ಸೇರಿಸಿ ಹೋರಾಡುವುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷ ಅಶ್ರಫ್ ಬಡಾಜೆ, ಉಪಾಧ್ಯಕ್ಷ ಅನ್ವರ್ ಅರಿಕ್ಕಾಡಿ, ಕಾರ್ಯದರ್ಶಿ ಶಬೀರ್ ಪೊಸೋಟು, ಕುಂಬಳೆ ಪಂಚಾಯತ್ ಸಮಿತಿ ಅಧ್ಯಕ್ಷ ನಾಸರ್ ಬಂಬ್ರಾಣ ಭಾಗವಹಿಸಿದರು.