ಐದು ವರ್ಷಗಳ ಹಿಂದೆ ನಡೆದ ಯುವತಿಯ ಕೊಲೆ: ಕೊಚ್ಚಿಯಿಂದ ಬಂದ ವಿಶೇಷ ಪರಿಣಿತ ಜೋಡಿ
ಪೊಲೀಸ್ ಶ್ವಾನ ಬಳಸಿ ಮೃತದೇಹ ಶೋಧ ಆರಂಭ
ಕಾಸರಗೋಡು: ಐದು ವರ್ಷಗಳ ಹಿಂದೆ ಕೊಲೆಗೈಯ್ಯಲ್ಪಟ್ಟ ಯುವತಿಯ ಮೃತದೇಹ ಪತ್ತೆಹಚ್ಚಲು ಈ ಹಿಂದೆ ಪೊಲೀಸರು ನಡೆಸಿದ ಶೋಧ ಕಾರ್ಯಾಚರಣೆ ಗಳೆಲ್ಲಾ ವಿಫಲಗೊಂಡ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಬದಿಗಿರಿಸಲಾಗಿದ್ದ ಅದರ ಶೋಧ ಕಾರ್ಯಾ ಚರಣೆಯನ್ನು ಪೊಲೀಸರು ಮತ್ತೆ ಆರಂಭಿಸಿದ್ದಾರೆ.
ಮೂಲತಃ ಕೊಲ್ಲಂ ಇರವಿಪುರಂ ವಾಳತ್ತಿಂಗಲ್ ವೇಳಿ ವೀಟಿಲ್‌ನ ಪ್ರಮೀಳ (೩೦) ಎಂಬಾಕೆಯ ಮೃತದೇಹದ ಪತ್ತೆಗಾಗಿರುವ ಕಾರ್ಯಾಚರಣೆಗೆ ಈಗ ಮರುಜೀವ ನೀಡಲಾಗಿದೆ. ಪ್ರಮೀಳ ಪತಿ ಮೂಲತಃ ತಳಿಪರಂಬ ಆಲಕ್ಕೋಡು ನಿವಾಸಿ ಸೆಲ್ವರಾಜ್‌ನೊಂದಿಗೆ ಕಾಸರ ಗೋಡು ವಿದ್ಯಾನಗರದ ಪನ್ನಿಪ್ಪಾರೆಯ ಬಾಡಿಗೆ ಕ್ವಾರ್ಟರ್ಸ್ ನಲ್ಲಿ ಈ ಹಿಂದೆ ವಾಸಿಸುತ್ತಿದ್ದಳು. ೨೦೧೯ ಸೆಪ್ಟಂಬರ್ ೧೯ರಂದು ರಾತ್ರಿ ಪ್ರಮೀಳಾ ಮತ್ತು ಪತಿಯ ಮಧ್ಯೆ ಜಗಳ ಉಂಟಾಗಿತ್ತು. ಇಬ್ಬರು ಮಕ್ಕಳೊಂದಿಗೆ ಪನ್ನಿಪ್ಪಾರೆಯ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಪ್ರಮೀಳ ಆ ಬಳಿಕ ದಿಢೀರ್ ಆಗಿ ನಾಪತ್ತೆಯಾಗಿದ್ದಳು. ಪತ್ನಿ ನಾಪತ್ತೆಯಾದ ಬಗ್ಗೆ ಸೆಲ್ವರಾಜ್ ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದನು. ಆ ಬಗ್ಗೆ ನಡೆಸಿದ ತನಿಖೆಯಲ್ಲಿ ಸೆಲ್ವರಾಜ್‌ನ ನಡವಳಿಕೆ ಬಗ್ಗೆ ಶಂಕೆಗೊಂಡ ಪೊಲೀಸರು ಆತನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ತಾನು ಪತ್ನಿ ಪ್ರಮೀಳಳನ್ನು ಕೊಂದು ಮೃತದೇಹವನ್ನು ಗೋಣಿ ಚೀಲದಲ್ಲಿ ಕಟ್ಟಿ ಅದನ್ನು ತೆಕ್ಕಿಲ್ ಹೊಳೆಗೆ ಎಸೆದಿರುವುದಾಗಿ ತಿಳಿಸಿದ್ದನು. ಆ ವೇಳೆ ಹೊಳೆಯಲ್ಲಿ ಭಾರೀ ನೀರಿನ ಸೆಳೆತವೂ ಇತ್ತು. ಮೃತದೇಹದ ಪತ್ತೆಗಾಗಿ ಅಂದು ಅಗ್ನಿಶಾಮಕದಳದ ಸಹಾಯದಿಂದ ಪೊಲೀಸರು ಹಲವು ದಿನಗಳ ತನಕ ಹೊಳೆಯಲ್ಲಿ ವ್ಯಾಪಕ ಶೋಧ ನಡೆಸಿದರೂ ಮೃತದೇಹ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಕೊನೆಗೆ ಆ ಕಾರ್ಯಾಚರಣೆಯನ್ನು ಪೊಲೀಸರು ತಾತ್ಕಾಲಿಕವಾಗಿ ಅಲ್ಲಿಗೇ ಕೊನೆಗೊಳಿ ಸಿದ್ದರು. ಮೊದಲು ಲೋಕಲ್ ಪೊಲೀಸರು ತನಿಖೆ ನಡೆಸಿದ ಈ ಪ್ರಕರಣವನ್ನು ಬಳಿಕ ಕ್ರೈಂ ಬ್ರಾಂಚ್ ವಿಭಾಗಕ್ಕೆ ಹಸ್ತಾಂತರಿಸಲಾಗಿತ್ತು. ಈಗ ಕ್ರೈಂ ಬ್ರಾಂಚ್ ಡಿವೈಎಸ್ಪಿ ಸುನಿಲ್ ಕುಮಾರ್ ನೇತೃತ್ವದ ತಂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ.ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಆರೋಪಿ ಸೆಲ್ವರಾಜ್ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡು ಕಳೆದ ಎರಡು ವರ್ಷಗಳಿಂದ ತನ್ನ ವಾಸವನ್ನು ಕಣ್ಣೂರಿಗೆ ಬದಲಾಯಿಸಿ ಕೊಂಡಿದ್ದನು. ಈ ಮಧ್ಯೆ ಆತ ಇತ್ತೀಚೆಗೆ ವಿದ್ಯಾನಗರ ಪಡುವಡ್ಕ ದಲ್ಲಿರುವ ನಿರ್ಜನ ಪ್ರದೇಶದ ಹಿತ್ತಿಲೊಂದಕ್ಕೆ ಬಂದು ಅಲ್ಲಿ ಯಾವುದನ್ನೋ ಹುಡುಕಾಡುತ್ತಿದ್ದನೆಂಬ ಮಾಹಿತಿ ತನಿಖಾ ತಂಡಕ್ಕೆ ಲಭಿಸಿತ್ತು. ಕೊಲೆಗೈಯ್ಯಲ್ಪಟ್ಟ ಪ್ರಮೀಳಾಳ ಮೃತದೇಹವನ್ನು ಆ ಪ್ರದೇಶದಲ್ಲಿ ಆರೋಪಿ ಹೂತಿಟ್ಟಿರಬಹುದೆಂಬ ಶಂಕೆ ಇದರಿಂದ ಪೊಲೀಸರಿಗೆ ಉಂಟಾಗಿತ್ತು. ಅದುವೇ ಈಗ ಆ ಪ್ರದೇಶದಲ್ಲಿ ಪೊಲೀಸರು ಶೋಧ ಮತ್ತೆ ಆರಂಭಿಸಿರುವುದರ ಪ್ರಧಾನ ಹಿನ್ನೆಲೆಯಾಗಿದೆ.