ಐಲ ಮೈದಾನವನ್ನು ಕಬಳಿಸಲು ಮತ್ತೆ ಪ್ರಯತ್ನ: ತಡೆಯಲು ಸಿದ್ಧತೆ
ಉಪ್ಪಳ: ಐಲ ಮೈದಾನವು ಶತಮಾನಗಳ ಕಾಲದಿಂದ ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಉತ್ಸವ ನಡೆಯುವ ಅಂಗಣವಾಗಿದ್ದು, ಇಲ್ಲಿನ ಬಹುತೇಕ ನಾಗರಿಕರಿಗೆ ಸ್ಪಷ್ಟವಾಗಿ ತಿಳಿದಿರುವ ಸತ್ಯ. ಕ್ಷೇತ್ರದ ಪ್ರಸಿದ್ಧ ಬೆಡಿಕಟ್ಟೆ ಅಲ್ಲದೆ ಇತರ ಎಂಟು ಪ್ರಧಾನ ಕಟ್ಟೆಗಳು ಇಲ್ಲಿ ನೆಲೆಸಿದ್ದು, ಪ್ರತೀ ಸಂಕ್ರಮಣದಂದು ಪೂಜೆಗಳು ನೆರವೇರುತ್ತದೆ. ಇತ್ತೀಚೆಗೆ ಸರಕಾರದ ವಿವಿಧ ಕಚೇರಿಗಳ ಅಧಿಕಾರಿಗಳು ಐಲ ಮೈದಾನಕ್ಕೆ ಆಗಮಿಸಿ ತಾಲೂಕು ಆಫೀಸು, ಇತರ ಹಲವು ಸರಕಾರಿ ಕಚೇರಿಗಳನ್ನು ಇಲ್ಲಿ ಸ್ಥಾಪಿಸುವ ಬಗ್ಗೆ ಹುನ್ನಾರ ನಡೆಸುತ್ತಿರುವುದು ಕ್ಷೇತ್ರದ ಭಕ್ತವೃಂದ ಗಮನಕ್ಕೆ ಬಂದಿರುತ್ತದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಕ್ಷೇತ್ರದಲ್ಲಿ ಸೇರಿದ ಐಲ ಮೈದಾನ ಸಂರಕ್ಷಣಾ ಸಮಿತಿಯು ಐಲ ಮೈದಾನವನ್ನು ಉಳಿಸುವ ಬಗ್ಗೆ ದೃಢ ಸಂಕಲ್ಪ ನಡೆಸಿದೆ. ಮೈದಾನ ಸಂರಕ್ಷಿಸುವ ಬಗ್ಗೆ ಕಾರ್ಯಕರ್ತರ ಸಮಿತಿ ವತಿಯಿಂದ ಜುಲೈ ೨೧ರಂದು ಐಲ ಕಲಾಭವನದಲ್ಲಿ ಬೃಹತ್ ಸಭೆಯನ್ನು ನಡೆಸಲು ತೀರ್ಮಾನಿಸಲಾಗಿದ.
ಕ್ಷೇತ್ರದ ಆಡಳಿತ ಮೊಕ್ತೇಸರರಾದ ಕೋಡಿಬೈಲು ನಾರಾಯಣ ಹೆಗ್ಡೆ ಹಾಗೂ ಮೊಕ್ತೇಸರ ಮಂಡಳಿಯವರು ಸಭೆಯಲ್ಲಿ ಸಲಹೆ ನೀಡಿದರು. ಮಂಗಲ್ಪಾಡಿ ಪಂಚಾಯತ್ ಸದಸ್ಯ ವಿಜಯ ಕುಮಾರ್ ರೈ ವಿಷಯ ಪ್ರಸ್ತಾಪಿಸಿದರು. ಧಾರ್ಮಿಕ, ಸಾಮಾಜಿಕ ಮುಂದಾಳು ವೀರಪ್ಪ ಅಂಬಾರು ಮಾತನಾಡಿದರು. ಸಂಚಾಲಕ ಮೋಹನ್‌ದಾಸ್ ಐಲ ಸ್ವಾಗತಿಸಿ ವಂದಿಸಿದರು.