ಐ.ಎನ್.ಎಲ್ ಕಾರ್ಯಕರ್ತ ಆಬೀದ್ ಕೊಲೆ ಪ್ರಕರಣ : ನ್ಯಾಯಾಲಯ ಬಳಿ ಸಾಕ್ಷಿದಾರನಿಗೆ ಬೆದರಿಕೆ: ಮೂವರ ವಿರುದ್ಧ ಕೇಸು
ಕಾಸರಗೋಡು: ಐಎನ್‌ಎಲ್ ಕಾರ್ಯಕರ್ತ ಕೂಡ್ಲು ಎರಿಯಾಲ್ ನಿವಾಸಿ ಆಬೀದ್ (28)ರನ್ನು ಕೊಲೆ ಪ್ರಕರಣದ ಸಾಕ್ಷಿದಾರನಿಗೆ ನ್ಯಾಯಾಲಯದ ಬಳಿ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಮೂರು ಮಂದಿಯ ವಿರುದ್ಧ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಕೊಲೆ ಪ್ರಕರಣದ ಸಾಕ್ಷಿದಾರ ಎರಿಯಾಲ್ ನಿವಾಸಿ ಇಬ್ರಾಹಿಂ ಖಲೀಲ್ (38) ಎಂಬಾತ ನೀಡಿದ ದೂರಿನಂತೆ ರಫೀಕ್, ಮಾರ್ಕೆಟ್ ರಫೀಕ್ ಮತ್ತು ಜಲೀಲ್ ಎಂಬವರ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ.
2007 ನವೆಂಬರ್ 20ರಂದು ಆಬೀದ್‌ನನ್ನು ಎರಿಯಾಲ್ ಬಳ್ಳೀರ್ ಎಂಬಲ್ಲಿ ಬೈಕ್‌ನಲ್ಲಿ ಬಂದ ಒಂದು ತಂಡ ಇರಿದು ಕೊಲೆಗೈದಿತ್ತು. ಈ ಪ್ರಕರಣದ ವಿಚಾರಣೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ತೃತೀಯ)ದಲ್ಲಿ ಈಗ ನಡೆಯುತ್ತಿದೆ. ಇದರಂತೆ ಸಾಕ್ಷಿದಾರ ಇಬ್ರಾಹಿಂ ಖಲೀಲ್‌ನ ಸಾಕ್ಷಿ ಹೇಳಿಕೆಯನ್ನು ನ್ಯಾಯಾಲಯ ನಿನ್ನೆ ದಾಖಲಿಸಿ ಕೊಂಡಿತ್ತು. ಅದಾದ ಬಳಿಕ ನಾನು ನ್ಯಾಯಾಲಯದ ಹೊರಗೆ ಬಂದಾಗ ನ್ಯಾಯಾಲಯ ಪರಿಸರದಲ್ಲಿ ಮೂವರು ಸೇರಿ ಬೆದರಿಕೆ ಒಡ್ಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಇಬ್ರಾಹಿಂ ಖಲೀಲ್ ಆರೋಪಿಸಿದ್ದಾನೆ.