ಒಬ್ಬಂಟಿಯಾಗಿ ವಾಸ ಮಾಡುತ್ತಿದ್ದ ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಉಪ್ಪಳ: ಒಬ್ಬಂಟಿಯಾಗಿ ವಾಸ ಮಾಡುತ್ತಿದ್ದ ಯುವಕನ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಮಂಡೆಕಾಪು ಬಳಿಯ ಸುಬ್ಬಯ್ಯಕಟ್ಟೆ ನಿವಾಸಿ ದಿ| ಬಟ್ಯಪ್ಪ ಭಂಡಾರಿಯವರ ಪುತ್ರ ಜಯ ಪ್ರಕಾಶ್ ಭಂಡಾರಿ (೪೫) ಎಂಬವರ ಮೃತದೇಹ ಪತ್ತೆಯಾಗಿದೆ. ಹಲವು ವರ್ಷಗಳಿಂದ ಒಬ್ಬಂಟಿಯಾಗಿ ವಾಸವಾಗಿದ್ದರೆನ್ನಲಾಗಿದೆ. ನಿರಂತರ ಅಂಗಡಿಪರಿಸರದಲ್ಲಿ ಕಂಡು ಬರುತ್ತಿದ್ದ ಇವರು ಅಲ್ಪ ದಿನಗಳಿಂದ ಕಾಣಿಸದ ಹಿನ್ನೆಲೆಯಲ್ಲಿ ಸಂಬಂಧಿಕರು ಶನಿವಾರ ಸಂಜೆ ಜಯಪ್ರಕಾಶ್ ವಾಸಿಸುತ್ತಿದ್ದ ಮನೆಗೆ ತೆರಳಿ ನೋಡಿದಾಗ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಸುಮಾರು ೧೫ ದಿನಗಳ ಹಿಂದೆ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ಕಂಬಳಿಯಿಂದ ಮನೆಯ ಅಡ್ಡಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮಾಹಿತಿ ತಿಳಿದು ತಲುಪಿದ ಸಿಪಿಎಂ ನೇತಾರ ಬಶೀರ್, ವಾರ್ಡ್ ಸದಸ್ಯ ಅಶೋಕ್ ಭಂಡಾರಿಯವರ ನೇತೃತ್ವದಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಂತೆ ಸ್ಥಳಕ್ಕೆ ತಲುಪಿದ ಕುಂಬಳೆ ಪೊಲೀಸರು ಮೃತದೇಹದ ಪಂಚನಾಮೆ ನಡೆಸಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮೃತದೇಹದ ಅಂತ್ಯ ಸಂಸ್ಕಾರ ನಿನ್ನೆ ಮಧ್ಯಾಹ್ನ ಮನೆ ಬಳಿ ನಡೆಸಲಾಯಿತು. ಇವರು ಅಬಕಾರಿ ಕೇಸೊಂದರಲ್ಲಿ ಜೈಲಿನಲ್ಲಿದ್ದು, ಮೂರು ತಿಂಗಳ ಹಿಂದೆ ಬಿಡುಗಡೆಗೊಂ ಡಿರುವುದಾಗಿ ಹೇಳಲಾಗುತ್ತಿದೆ. ಮೃತರು ತಾಯಿ ರತಿ, ಪತ್ನಿ ರಾಜೀವಿ, ಮಕ್ಕಳಾದ ವಿದೀತ್, ಆದೀಶ್, ಸಹೋದರಿ ಯರಾದ ಹರಿಣಾಕ್ಷಿ, ವಿಶಾಲಾಕ್ಷಿ, ಗೀತಾ, ಜಯಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.