ಓಣಂ ಸ್ಪೆಷಲ್ ಡ್ರೈವ್: ಕಾರಿನಲ್ಲಿ ಸಾಗಿಸುತ್ತಿದ್ದ 319 ಲೀಟರ್ ಕರ್ನಾಟಕ ಮದ್ಯ ವಶ: ಓರ್ವ ಸೆರೆ
ಕಾಸರಗೋಡು: ಓಣಂ ಹಬ್ಬ ಸಮೀಪಿಸುತ್ತಿರುವಂತೆಯೇ ಹೊರ ರಾಜ್ಯಗಳಿಂದ ಜಿಲ್ಲೆಗೆ ಭಾರೀ ಪ್ರಮಾಣದಲ್ಲಿ ಅಕ್ರಮ ಮದ್ಯ, ಸ್ಪಿರಿಟ್ ಮತ್ತು ಮಾದಕದ್ರವ್ಯ ಹರಿಯತೊಡಗಿದ್ದು, ಅದನ್ನು ಪತ್ತೆಹಚ್ಚಲು ಅಬಕಾರಿ ಇಲಾಖೆ ಆರಂಭಿಸಿರುವ ಸ್ಪೆಷಲ್ ಡ್ರೈವ್ ಕಾರ್ಯಾಚರಣೆಯಂತೆ ಕಾರೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 319 ಲೀಟರ್ ಕರ್ನಾಟಕ ಮತ್ತು ಗೋವಾ ನಿರ್ಮಿತ ಮದ್ಯವನ್ನು ಪತ್ತೆಹಚ್ಚಲಾಗಿದೆ.
ವಶಪಡಿಸಿದ ಮಾಲಿನಲ್ಲಿ 302.4 ಲೀಟರ್ ಕರ್ನಾಟಕ ಹಾಗೂ 12.28 ಲೀಟರ್ ಗೋವಾ ನಿರ್ಮಿತ ಮದ್ಯ ಒಳಗೊಂಡಿದೆ. ಕಾಸರಗೋಡು ನಗರದ ಕರಂದಕ್ಕಾಡ್‌ನಲ್ಲಿ ಈ ಕಾರ್ಯಾಚರಣೆ ನಡೆದಿದೆ. ಮದ್ಯ ಸಾಗಾಟಕ್ಕೆ ಸಂಬಂಧಿಸಿ ರವಿಕಿರಣ್ ಎಂಬಾತನನ್ನು ಬಂಧಿಸಿ ಕಾಸರಗೋಡು ರೇಂಜ್ ಅಬಕಾರಿ ಕಚೇರಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶೋಬ್ ಕೆ.ಎಸ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.
ತಂಡದಲ್ಲಿ ಎಕ್ಸೈಸ್ ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಸೋನು ಸೆಬಾಸ್ಟಿನ್, ಮಂಜುನಾಥ ವಿ, ಚಾಲ್ಸ್ ಜೋಸ್, ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಜನಾರ್ದನನ್ ಕೆ.ಎಂ ಮತ್ತು ಚಾಲಕ ಕ್ರಿಸ್ಟಿ ಪಿ.ಎ ಎಂಬಿವರು ಒಳಗೊಂಡಿದ್ದರು.