ಕಂಚಿಕಟ್ಟೆ ಸೇತುವೆ ಪೂರ್ಣ ಮುಚ್ಚುಗಡೆಯಿಂದ ಸಾರಿಗೆ ಅಡಚಣೆ: ನಾಗರಿಕರಿಗೆ ಸಮಸ್ಯೆ ; ಬದಲಿ ವ್ಯವಸ್ಥೆಗೆ ಒತ್ತಾಯ
ಕುಂಬಳೆ: ಕಂಚಿಕಟ್ಟೆ ಸೇತುವೆ ಯನ್ನು ಅಧಿಕಾರಿಗಳು ಪೂರ್ಣವಾಗಿ ಮುಚ್ಚುಗಡೆಗೊಳಿಸಿರುವುದು ತೀವ್ರ ಸಾರಿಗೆ ಸಮಸ್ಯೆಗೆ ಕಾರಣವಾಗಿದೆ. ಈ ಸೇತುವೆ ಮೂಲಕ ವಿವಿಧ ಭಾಗಗಳಿಗೆ ಸಂಚರಿಸಬೇಕಾದವರು ತೀವ್ರ ಸಮಸ್ಯೆಯಾಗಿ ಪರಿಣಮಿಸಿದೆ. ಕೊಡಿಯಮ್ಮೆ, ಕೆಳಗಿನ ಕೊಡಿಯಮ್ಮೆ, ಪೆರ್ವನಡ್ಕ, ಬಂಬ್ರಾಣ, ಕಂಚಿಕಟ್ಟೆ, ಮಳಿ ಭಾಗದವರಿಗೆ ಕುಂಬಳೆಗೆ ತಲುಪಬೇಕಾದರೆ ಆರಿಕ್ಕಾಡಿ ಮೂಲಕ ಸುತ್ತುಬಳಸಿ ಸಂಚರಿಸಬೇಕಾಗಿದೆ. ಇದಕ್ಕೆ ಸುಮಾರು ಎಂಟು ಕಿಲೋ ಮೀಟರ್ ಹೆಚ್ಚು ಸಂಚರಿಸಬೇಕಾಗಿದ್ದು, ಅಲ್ಲದೆ ಹೆಚ್ಚು ಸಮಯವೂ ತಗಲುತ್ತದೆ.
ಕಂಚಿಕಟ್ಟೆ ಸೇತುವೆ ಅಪಘಾತ ಭೀತಿಯನ್ನು ಎದುರಿಸುತ್ತಿದೆಯೆಂದು ತಿಳಿಸಿ ಅಧಿಕಾರಿಗಳು ಅಲ್ಲಿ ಮುನ್ಸೂಚನಾ ಫಲಕ ಸ್ಥಾಪಿಸಿದ್ದರು. ಅನಂತರ ಹೊಸ ಸೇತುವೆ ನಿರ್ಮಿಸಲು ಮಣ್ಣು ತಪಾಸಣೆ ನಡೆಸಬೇಕಾಯಿತು. ಆದರೆ ಅನಂತರ ಯಾವುದೇ ಕ್ರಮ ಉಂಟಾಗಿರಲಿಲ್ಲ ಮೂರು ತಿಂಗಳ ಹಿಂದೆ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಸ್ಥಳಕ್ಕೆ ಭೇಟಿ ನೀಡಿ ಸೇತುವೆ ಮೂಲಕ ವಾಹನ ಸಂಚಾರ ಪೂರ್ಣವಾಗಿ ತಡೆಯೊಡ್ಡಬೇಕೆಂದು ಆದೇಶಿಸಿದ್ದರು. ಆದರೆ ನಿಯಂತ್ರಣಗಳನ್ನು ಉಲ್ಲಂಘಿಸಿ ಘನ ವಾಹನಗಳೂ ಈ ಸೇತುವೆ ಮೇಲೆಯೇ ಸಂಚರಿಸುತ್ತಿದ್ದವು. ಕಳೆದ ತಿಂಗಳು ಅಧಿಕಾರಿಗಳು ತಲುಪಿ ಸೇತುವೆ ಮೂಲಕ ವಾಹನ ಸಂಚಾರಕ್ಕೆ ತಡೆಯೊಡ್ಡಿ ಕಾಂಕ್ರೀಟು ಗೋಡೆ ನಿರ್ಮಿಸತೊಡಗಿದರು. ಆದರೆ ಅದು ಪರೀಕ್ಷಾ ಕಾಲವಾದುದರಿಂದ ವಿದ್ಯಾರ್ಥಿಗಳಿಗೆ ಸಂಚಾರ ಸಮಸ್ಯೆ ಎದುರಾಗಲಿರುವುದರಿಂದ ಸಣ್ಣ ವಾಹನಗಳ ಸಂಚಾರಕ್ಕಾದರೂ ಅವಕಾಶ ಒದಗಿಸಬೇಕೆಂದು ನಾಗರಿಕರು ಆಗ್ರಹಪಟ್ಟರು. ಅದರಂತೆ ಆಟೋ ರಿಕ್ಷಾ ಹಾಗೂ ದ್ವಿಚಕ್ರ ವಾಹನಗಳನ್ನು ಸೇತುವೆ ಮೂಲಕ ಸಂಚರಿಸಲು ಅಧಿಕಾರಿಗಳು ಅನುಮತಿ ನೀಡಿದ್ದರೂ ಕಳೆದ ಶನಿವಾರ ಲೋಕೋಪಯೋಗಿ ಅಧಿಕಾರಿಗಳು ತಲುಪಿ ಸೇತುವೆಗೆ ಕಾಂಕ್ರೀಟ್ ನಡೆಸಿ ಸಂಚಾರಕ್ಕೆ ಪೂರ್ಣವಾಗಿ ತಡೆಯೊಡ್ಡಿದ್ದಾರೆ. ಇದರಿಂದ ಜನತೆಯ ಸಂಚಾರ ಸಮಸ್ಯೆ ಉಲ್ಭಣಿಸಿದೆ.
ಇದೇ ವೇಳೆ ಸೇತುವೆ ಅಪಾಯ ಕಾರಿ ಸ್ಥಿತಿಯಲ್ಲಿದೆಯೆಂದು ನಾಲ್ಕು ವರ್ಷಗಳ ಹಿಂದೆಯೇ ತಿಳಿದುಬಂದಿ ದ್ದರೂ ಅದರ ದುರಸ್ತಿಗೆ ಅಥವಾ ಹೊಸ ಸೇತುವೆ ನಿರ್ಮಾಣಕ್ಕೆ ಅಧಿಕಾರಿಗಳು ಇದುವರೆಗೆ ಯಾಕೆ ಕ್ರಮ ಕೈಗೊಂಡಿಲ್ಲ ವೆಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ. ತೋಡಿನಲ್ಲಿ ಸಣ್ಣ ಪ್ರಮಾಣದಲ್ಲಿ ಮಾತ್ರವೇ ನೀರು ಹರಿದು ಹೋಗುತ್ತಿದೆ. ಹಾಗಿರುವಾಗ ಬದಲಿ ವ್ಯವಸ್ಥೆ ಏರ್ಪಡಿಸಲು ವಿಳಂಬ ಮಾಡುತ್ತಿರುವುದೇಕೆಂದೂ ನಾಗರಿಕರು ಪ್ರಶ್ನಿಸುತ್ತಿದ್ದಾರೆ.