ಕಂಚಿಕಟ್ಟೆ ಸೇತುವೆ ಬಳಿ ಬೃಹತ್ ಹೊಂಡ ತೋಡಿ ವಾಹನ ಸಂಚಾರಕ್ಕೆ ತಡೆಯೊಡ್ಡಲು ನಿರ್ಧಾರ
ಕುಂಬಳೆ: ಅಪಾಯ ಭೀತಿ ಎದುರಿಸುತ್ತಿರುವ ಕಂಚಿಕಟ್ಟೆ ಸೇತುವೆಯ ಎರಡೂ ಭಾಗದಲ್ಲಿ ಬೃಹತ್ ಹೊಂಡ ತೋಡಿ ವಾಹನ ಸಂಚಾರಕ್ಕೆ ತಡೆಯೊಡ್ಡಲು ಲೋಕೋಪಯೋಗಿ ಹಾಗೂ ನೀರಾವರಿ ಇಲಾಖೆ ನಿರ್ಧರಿಸಿದೆ. ಇದರ ಕಾಮಗಾರಿ ಶೀಘ್ರ ಆರಂಭ ಗೊಳ್ಳಲಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇತುವೆ ಅಪಾಯಕಾರಿಯಾದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಿ ಅಧಿಕಾರಿಗಳು ಇತ್ತೀಚೆಗೆ ಸೇತುವೆ ಬಳಿ ರಸ್ತೆಯ ಕಾಂಕ್ರೀಟ್ ಗೋಡೆ ನಿರ್ಮಿಸಿದ್ದರು. ಆದರೆ ಆ ಗೋಡೆಯನ್ನು ಅಪರಿಚಿತರು ಕೆಡವಿ ಹಾಕಿದ್ದಾರೆ. ಮೊನ್ನೆ ರಾತ್ರಿ ಗೋಡೆ ಯನ್ನು ಕೆಡವಿ ಹಾಕಲಾಗಿದೆಯೆಂದು ಅಂದಾಜಿಸಲಾಗಿದೆ. ನಿನ್ನೆಯಷ್ಟೇ ಇದು ನಾಗರಿಕರ ಅರಿವಿಗೆ ಬಂದಿದೆ. ಈ ವಿಷಯ ತಿಳಿದು ಲೋಕೋ ಪಯೋಗಿ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ನಿನ್ನೆ ಸ್ಥಳಕ್ಕೆ ಭೇಟಿ ನೀಡಿ ಸೇತುವೆಯ ಎರಡೂ ಭಾಗದಲ್ಲಿ ಜೆಸಿಬಿ ಬಳಸಿ ಬೃಹತ್ ಹೊಂಡ ತೋಡಲು ನಿರ್ಧರಿಸಿದ್ದಾರೆ.
ಸೇತುವೆ ಮೇಲೆ ವಾಹನ ಸಂಚಾರಕ್ಕೆ ತಡೆಯೊಡ್ಡಿ ಗೋಡೆ ನಿರ್ಮಿಸಿರುವುದರಿಂದ ಈ ಭಾಗದ ಜನರಿಗೆ ಕುಂಬಳೆಗೆ ತೆರಳಬೇಕಾದರೆ ಸುತ್ತು ಬಳಸಿ ಸಂಚರಿಸಬೇಕಾಗಿ ಬಂದಿದೆ. ಇದರಿಂದ ನಾಗರಿಕರು ಮತ್ತೆ ವಿರೋಧ ವ್ಯಕ್ತಪಡಿಸಿದರು.