ಕಣ್ಣೂರಿನಲ್ಲಿ ಸಂಚಾರ ಕೊನೆಗೊಳಿಸುವ ರೈಲುಗಳನ್ನು ಮಂಗಳೂರಿಗೆ ವಿಸ್ತರಿಸಲು ಎಐಟಿಯುಸಿ ಮನವಿ
ಕಾಸರಗೋಡು: ಕಣ್ಣೂರುವರೆಗೆ ಸಂಚಾರ ನಡೆಸುವ ತಿರುವನಂತಪುರ, ಕಣ್ಣೂರು ಜನಶತಾಬ್ದಿ ಎಕ್ಸ್‌ಪ್ರೆಸ್, ಕಣ್ಣೂರು- ಆಲಪ್ಪುಳ ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲುಗಳನ್ನು ಮಂಗಳೂರುವರೆಗೆ ವಿಸ್ತರಿಸಬೇಕೆಂದು ಆಗ್ರಹಿಸಿ ಎಐಟಿಯುಸಿ ಕಾಸರಗೋಡು ಜಿಲ್ಲಾ ಕೌನ್ಸಿಲ್ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ರಿಗೆ ಮನವಿ ನೀಡಿದೆ.
ಉತ್ತರ ಕೇರಳ, ಪ್ರತ್ಯೇಕವಾಗಿ ಕಾಸರಗೋಡು ಜಿಲ್ಲೆಯ ಜನರು ಪ್ರಯಾಣಕ್ಕಾಗಿ ಸಮಸ್ಯೆ ಅನುಭವಿಸುತ್ತಿದ್ದು, ರೈಲ್ವೇ ಈ ಪ್ರದೇಶವನ್ನು ಅವಗಣಿಸಿದೆ. ಈ ಎರಡು ರೈಲುಗಳನ್ನು ಮಂಗಳೂರುವರೆಗೆ ವಿಸ್ತರಿಸಿದರೆ ಸಂಚಾರ ಸಮಸ್ಯೆಗೆ ಅಲ್ಪ ಪರಿಹಾರವಾದಿತೆಂದು ಮನವಿಯಲ್ಲಿ ಸೂಚಿಸಲಾಗಿದೆ. ಕಣ್ಣೂರು- ಕಾಸರಗೋಡು ಮಧ್ಯೆ ೧೦೦ಕ್ಕೂ ಅಧಿಕ ಕಿಲೋ ಮೀಟರ್ ಸಂಚಾರ ದೂರವಿದ್ದು, ಕಣ್ಣೂರಿನಲ್ಲಿ ಸಂಚಾರ ಕೊನೆಗೊಳಿಸುವ ಈ ರೈಲುಗಳಲ್ಲಿ ಸಂಚರಿಸಬೇಕಿದ್ದರೆ ರಾತ್ರಿ ವೇಳೆಯಲ್ಲಿ ಹೆಚ್ಚು ಖರ್ಚು ಮಾಡಿ ಬಾಡಿಗೆ ವಾಹನಗಳಲ್ಲಿ ಕಣ್ಣೂರಿಗೆ ತೆರಳ ಬೇಕಾಗುತ್ತಿದೆ. ಕಾಸರಗೋಡಿನಿಂದ ದಿನವೂ ನೂರಾರು ಮಂದಿ ತಿರುವನಂತಪುರದ ಆರ್‌ಸಿಸಿ ಸಹಿತದ ವಿವಿಧ ಆಸ್ಪತ್ರೆಗಳಿಗೆ ತೆರಳುತ್ತಿದ್ದಾರೆ. ಕಣ್ಣೂರಿನಲ್ಲಿ ಸಂಚಾರ ಕೊನೆಗೊಳಿಸುವ ಈ ಎರಡು ರೈಲುಗಳನ್ನು ಮಂಗಳೂರುವರೆಗೆ ವಿಸ್ತರಿಸಿದರೆ ಕಾಸರಗೋಡು ಜಿಲ್ಲೆಯವರಿಗೆ ಬಹಳ ಪ್ರಯೋಜನಕರವಾದಿತೆಂದು ಮನವಿಯಲ್ಲಿ ವಿವರಿಸಲಾಗಿದೆ.