ಕಯ್ಯಾರರ ವ್ಯಕ್ತಿತ್ವ, ಆದರ್ಶ ನವ ಪೀಳಿಗೆಗೆ ಮಾರ್ಗದರ್ಶಿ -ಬೇ.ಸಿ. ಗೋಪಾಲಕೃಷ್ಣ
ಕಾಸರಗೋಡು: ಬಹುಮುಖ ವ್ಯಕ್ತಿತ್ವದ ಕಯ್ಯಾರರು ಸಾಹಿತಿಯಾಗಿ, ಹೋರಾಟಗಾರನಾಗಿ ಕನ್ನಡ ನಾಡಿನಾದ್ಯಂತ ಪರಿಚಿತರು.ನೇಗಿಲು ಹಿಡಿದ ಕೈಯಲ್ಲಿ ಲೇಖನಿ ಹಿಡಿದು ಸಮಾಜ, ಸಾಹಿತ್ಯ, ಸಂಸ್ಕೃತಿಯ ಸಂವರ್ಧನೆಗಾಗಿ ದುಡಿದವರು. ಬದುಕು ಮತ್ತು ಬರಹಗಳಲ್ಲಿ ಅವರು ನೀಡಿದ ಸಂದೇಶವನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಲು ಯೋಜನೆ ರೂಪಿಸಬೇಕಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಬೇ.ಸಿ ಗೋಪಾಲಕೃಷ್ಣ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಹಯೋಗದಲ್ಲಿ ಸಮತಾ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಬದಿಯಡ್ಕ ಬೋಳುಕಟ್ಟೆಯ ಹಿರಿಯ ನಾಗರಿಕರ ವಿಶ್ರಾಂತಿ ಗೃಹ ‘ಹಗಲು ಮನೆ’ಯಲ್ಲಿ ನಡೆದ ‘ನಾಡೋಜ, ಡಾ.ಕಯ್ಯಾರ ಕಿಞ್ಞಣ್ಣ ರೈ ಅವರ ೧೦೯ನೇ ಜನ್ಮದಿನಾಚರಣೆ’ ಕಾರ್ಯಕ್ರಮದಲ್ಲಿ ‘ಕಯ್ಯಾರರ ಬದುಕು-ಬರಹ ‘ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
ನಿವೃತ್ತ ಮುಖ್ಯ ಶಿಕ್ಷಕ ಪಿಲಿಂಗಲ್ಲು ಕೃಷ್ಣಭಟ್ ಅಧ್ಯಕ್ಷತೆ ವಹಿಸಿದರು.
ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಈಶ್ವರ ಭಟ್ ಪೆರ್ಮುಖ ,ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಡಾ. ಶ್ರೀಶ ಕುಮಾರ ಪಂಜಿತ್ತಡ್ಕ, ವ್ಯಂಗ್ಯಚಿತ್ರಕಾರ ವೆಂಕಟ್ ಭಟ್ ಎಡನೀರು, ಸಾಹಿತ್ಯ ಸಂಘಟಕಿ ಆಯಿಷಾ ಎ. ಎ ಪೆರ್ಲ, ನಿವೃತ್ತ ಪ್ರಾಂಶುಪಾಲ ಮೈರ್ಕಳ ನಾರಾಯಣ ಭಟ್ ಶುಭ ಹಾರೈಸಿದರು.
ಬಳಿಕ ಕಯ್ಯಾರ ಕಿಞ್ಞಣ್ಣ ರೈ ಅವರ ಕಾವ್ಯಗಳ ವಾಚನ ಮತ್ತು ಗಾಯನ ನಡೆಯಿತು. ಹಿರಿಯ ಸಾಹಿತಿ ರಾಧಾ ಕೃಷ್ಣ ಕೆ.ಉಳಿಯತ್ತಡ್ಕ,ಕವಿ ಬಾಲಮಧುರ ಕಾನನ, ವನಜಾಕ್ಷಿ ಚಂಬ್ರಕಾನ, ದಿವ್ಯಾಗಟ್ಟಿ ಪರಕ್ಕಿಲ, ಚಂದ್ರಕಲಾ ನೀರಾಳ ಕಾವ್ಯ ವಾಚನ ಮಾಡಿದರು. ಕಯ್ಯಾರರ ಪುತ್ರ ಕೃಷ್ಣಪ್ರದೀಪ ರೈ, ಮುಹಮ್ಮದಾಲಿ ಪೆರ್ಲ, ಬಾಲಕೃಷ್ಣ ಬೇರಿಕೆ, ನಿರ್ಮಲಾ ಶೇಷಪ್ಪ ಖಂಡಿಗೆ, ರಾಮ ಪಟ್ಟಾಜೆ, ಕೃಷ್ಣ ದರ್ಭೆತಡ್ಕ,ಉದಯ ಕುಮಾರ್. ಎಂ, ಸುಭಾಷ್ ಪೆರ್ಲ ಉಪಸ್ಥಿತರಿದ್ದರು. ಸುಂದರ ಬಾರಡ್ಕ ಸ್ವಾಗತಿಸಿ, ವನಜಾಕ್ಷಿ ಚಂಬ್ರಕಾನ ನಿರೂಪಿಸಿದರು. ದಿವ್ಯಾ ಗಟ್ಟಿ ಪರಕ್ಕಿಲ ವಂದಿಸಿದರು.