ಕಲೆಕ್ಟ್ರೇಟ್ ಮಾರ್ಚ್: 40 ಎಂಎಸ್‌ಎಫ್ ಕಾರ್ಯಕರ್ತರ ವಿರುದ್ಧ ಕೇಸು
ಕಾಸರಗೋಡು: ವಯನಾಡ್ ಪೂಕಾಟ್ ವೆಟರ್ನರಿ ಕಾಲೇಜು ವಿದ್ಯಾರ್ಥಿ ಜೆ.ಎಸ್. ಸಿದ್ಧಾರ್ಥ್‌ರ ಸಾವು ಪ್ರಕರಣದ ಆರೋಪಿಗಳನ್ನು ಪೊಲೀಸರು ಮತ್ತು ಸರಕಾರ ಸಂರಕ್ಷಿಸುತ್ತಿದೆ ಎಂದು ಆರೋಪಿಸಿ ಹಾಗೂ ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿ ಎಂಎಸ್‌ಎಫ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಿನ್ನೆ ಕಾಸರಗೋಡು ಕಲೆಕ್ಟರೇಟ್‌ಗೆ ನಡೆಸಲಾದ ಮಾರ್ಚ್ ಮತ್ತು ಧರಣಿಗೆ ಸಂಬಂಧಿಸಿ 40 ಮಂದಿ ಎಂಎ ಸ್‌ಎಫ್ ಕಾರ್ಯಕರ್ತರ ವಿರುದ್ಧ ಪೊಲೀ ಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರ ಕರ್ತವ್ಯ ನಿರ್ವಹಣೆ ಮತ್ತು ಸಾರಿಗೆ ಸಂಚಾರಕ್ಕೆ ಅಡಚಣೆ, ಅನುಮತಿ ಪಡೆಯದೆ ಮಾರ್ಚ್ ನಡೆಸಿದ ಆರೋಪದಂತೆ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಂಎಸ್‌ಎಫ್ ಜಿಲ್ಲಾ ನೇತಾರರಾದ ಸೈಯ್ಯಿದ್ ತ್ವಾಹ ಸಿ.ಎಚ್, ಸಯ್ಯಿದ್ ಮೊಹಮ್ಮದ್ ಸೈಫುದ್ದೀನ್ ಸೇರಿದಂತೆ ೧೦ ಮಂದಿ ಹಾಗೂ ಕಂಡರೆ ಗುರುತು ಹಚ್ಚಲಾಗುವ ಇತರ ೩೦ ಮಂದಿ ಸೇರಿದಂತೆ ಒಟ್ಟು ೪೦ ಮಂದಿಯ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಕಲೆಕ್ಟರೇಟ್ ಮುಂದೆ ನಿನ್ನೆ ನಡೆದ ಮಾರ್ಚ್ ಭಾರೀ ಘರ್ಷಣೆಗೂ ದಾರಿ ಮಾಡಿಕೊಟ್ಟಿದೆ. ಚಳವಳಿ ನಿರತರನ್ನು ಚದುರಿಸಲು ಪೊಲೀಸರು ಜಲ ಪಿರಂಗಿಯನ್ನೂ ಪ್ರಯೋಗಿಸಿದರು.