ಕಳಮಶ್ಶೇರಿ ಬಾಂಬ್ ಸ್ಫೋಟ: ಸ್ಕೆಚ್ಗೆ ರೂಪು ನೀಡಿದ್ದು ದುಬಾಯಿಯಲ್ಲಿ
ಎರ್ನಾಕುಳಂ: ಕಳಮಶ್ಶೇರಿ ಯಹೋವನ ಸಮಾವೇಶ ನಡೆಯುತ್ತಿದ್ದ ಕನ್ವೆನ್ಶನ್ ಹಾಲ್ನಲ್ಲಿ ಕಳೆದ ಭಾನುವಾರ ನಡೆಸಲಾದ ತ್ರಿವಳಿ ಬಾಂಬ್ ಸ್ಫೋಟದ ಸ್ಕೆಚ್ಗೆ ರೂಪು ನೀಡಿದ್ದು ದುಬಾಯಿಯಲ್ಲಾ ಗಿದೆ ಎಂದು ತನಿಖಾ ತಂಡಕ್ಕೆ ಸ್ಪಷ್ಟ ಮಾಹಿತಿ ಲಭಿಸಿದ್ದು, ಅದರಿಂದ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ದುಬಾಯಿಗೂ ವಿಸ್ತರಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಆರೋಪಿ ಚೆಲವನ್ನೂರು ವೇಲಿಕಗತ್ತ ವೀಟಿಲ್ನ ಮಾರ್ಟಿನ್ ಡೊಮಿನಿಕ್ನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಈ ಬಾಂಬ್ ಸ್ಫೋಟದ ಸ್ಕೆಚ್ಗೆ ರೂಪು ನೀಡಿದ್ದು ದುಬಾಯಿಯಲ್ಲಿ ಆಗಿದೆ ಎಂದು ಆತ ತನಿಖಾ ತಂಡದ ಮುಂದೆ ಬಾಯಿ ಬಿಟ್ಟಿದ್ದಾನೆ. ಈತ ಕಳೆದ ೧೫ ವರ್ಷಗಳಿಂದ ದುಬಾಯಿಯಲ್ಲಿ ಇಲೆಕ್ಟ್ರೀಶಿಯನ್ ಆಗಿ ದುಡಿದಿದ್ದನು. ಅಲ್ಲಿಂದ ಎರಡು ತಿಂಗಳ ಹಿಂದೆಯಷ್ಟೇ ಊರಿಗೆ ಹಿಂತಿರುಗಿದ್ದನು. ದುಬಾಯಿಯಲ್ಲೇ ಆತ ಬಾಂಬ್ ಸ್ಫೋಟಕ್ಕೆ ಸ್ಕೆಚ್ಗೆ ರೂಪು ನೀಡಿದ್ದನು. ಅದಕ್ಕೆ ಅಲ್ಲಿ ಆತನಿಗೆ ಯಾರಾದರೂ ಸಹಾಯ ಒದಗಿಸಿದ್ದಾರೆಯೇ? ಹಾಗಿದ್ದಲ್ಲಿ ಅವರು ಯಾರು? ಅದರ ಉದ್ದೇಶವೇನು ಎಂಬ ಬಗ್ಗೆಯೂ ಎನ್ಐಎ ತನಿಖೆ ನಡೆಸುತ್ತಿದೆ.
ಬಾಂಬ್ ಸ್ಫೋಟ ನಡೆದ ಹಿಂದಿನ ರಾತ್ರಿ ಮಾರ್ಟಿನ್ಗೆ ಫೋನ್ ಕರೆಯೊಂದು ಬಂದಿತ್ತೆಂದೂ, ಅದು ಯಾರು ಎಂದು ನಾನು ಮಾರ್ಟಿನ್ನನ್ನು ಪ್ರಶ್ನಿಸಿದಾಗ ಅದಕ್ಕೆ ಆತ ತನ್ನಲ್ಲಿ ಸಿಡಿಮಿಡಿಗೊಂ ಡಿದ್ದನೆಂದು ಆತನ ಪತ್ನಿಯೂ ತನಿಖಾ ತಂಡಕ್ಕೆ ಹೇಳಿಕೆ ನೀಡಿದ್ದಾಳೆ. ಆದ್ದರಿಂದ ಆ ಫೋನ್ ಕರೆಯನ್ನೂ ಕೇಂದ್ರೀಕರಿಸಿ ತನಿಖೆ ನಡೆಸಲಾಗುತ್ತಿದೆ.
ಆರೋಪಿ ಮಾರ್ಟಿನ್ನನ್ನು ಪೊಲೀಸರು ನಿನ್ನೆ ವಿವಿಧೆಡೆಗಳಿಗೆ ಸಾಗಿಸಿ ಅಗತ್ಯದ ಮಾಹಿತಿ ಸಂಗ್ರಹಿಸಿದ ನಂತರ ಆತನನ್ನು ನಿನ್ನೆ ಸಂಜೆ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ. ಬಳಿಕ ನ್ಯಾಯಾಲಯದ ಆದೇಶ ಪ್ರಕಾರ ಆತನನ್ನು ಎರ್ನಾಕುಳಂ ಜಿಲ್ಲೆಯ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.