ಕಳವಿಗೀಡಾದ ೧೩ ಕ್ವಿಂಟಾಲ್ ಅಡಿಕೆ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಮನೆಗೆ ಹೊಂದಿಕೊಂಡಿರುವ ಶೆಡ್ನಿಂದ ಕಳವಿಗೀಡಾದ ೧೩ ಕ್ವಿಂಟಾಲ್ ಅಡಿಕೆ ಹಿತ್ತಿಲಿನಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಚೆಮ್ನಾಡ್ ಬಳಿಯ ಕಾಡಾಂಬಳ್ಳಿ ಎಂಬಲ್ಲಿನ ಕೆ. ನಾರಾಯಣನ್ ನಾಯರ್ರ ಮನೆಗೆ ಹೊಂದಿಕೊಂ ಡಿರುವ ಶೆಡ್ನಿಂದ ಕಳೆದ ಗುರುವಾರ ರಾತ್ರಿ ಕಳವಿಗೀಡಾಗಿತ್ತು. ಸುಲಿದ ಅಡಿಕೆಯನ್ನು ೨೦ ಗೋಣಿ ಚೀಲಗಳಲ್ಲಿ ತುಂಬಿಸಿಡಲಾಗಿತ್ತು. ಗುರುವಾರ ರಾತ್ರಿ ೯.೩೦ರಿಂದ ಶುಕ್ರವಾರ ಬೆಳಿಗ್ಗೆ ೫.೩೦ರ ಮಧ್ಯೆ ಅಡಿಕೆ ಕಳವಿಗೀಡಾಗಿ ರುವುದಾಗಿ ದೂರಲಾಗಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಮೇಲ್ಪರಂಬ ಪೊಲೀಸ್, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ತಲುಪಿ ಪರಿಶೀಲನೆ ನಡೆಸಿದ್ದರು. ಇದೇ ವೇಳೆ ಮನೆ ಸಮೀಪದಲ್ಲಾಗಿ ಮೂರು ಮಂದಿ ಮಧ್ಯರಾತ್ರಿ ವೇಳೆ ನಡೆದು ಹೋಗುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಕಂಡುಬಂದಿತ್ತು.
ಅಡಿಕೆಯನ್ನು ವಾಹನದಲ್ಲಿ ಕೊಂ ಡೊಯ್ಯಲಾಗಿಲ್ಲವೆಂದು ಖಚಿತಪಡಿಸಿದ ಪೊಲೀಸರು ಪರಿಸರ ಪ್ರದೇಶದಲ್ಲಿ ಶೋಧ ನಡೆಸಲು ನಿರ್ದೇಶಿಸಿದ್ದರು. ಇದರಂತೆ ಹುಡುಕಾಡುತ್ತಿದ್ದಾಗ ಶನಿವಾರ ಮಧ್ಯಾಹ್ನ ವೇಳೆ ಮನೆಯ ೨೦೦ ಮೀಟರ್ ದೂರದಲ್ಲಿ ಅಡಿಕೆ ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸ್ ತನಿಖೆ ಮುಂದುವರಿಯುತ್ತಿದೆ.