ಕಾಂಗ್ರೆಸ್ ಮುಖಂಡನ ಜೊತೆ ಸೆಲ್ಫಿ ಎಣ್ಮಕಜೆ ಪಂ. ಸದಸ್ಯನ ಅಮಾನತುಗೈದ ಬಿಜೆಪಿ
ಪೆರ್ಲ: ಎಣ್ಮಕಜೆ ಪಂಚಾಯತ್ ಸಾಯ ವಾರ್ಡ್ ಪ್ರತಿನಿಧಿ ಮಹೇಶ್ ಭಟ್ರನ್ನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿರು ವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ಬಿಜೆಪಿ ವಿರುದ್ಧ ಕ್ರಮಗಳು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ರಾಜ್ಯ ಅಧ್ಯಕ್ಷರ ಅನುಮತಿಯೊಂದಿಗೆ ಜಿಲ್ಲಾ ಸಮಿತಿ ಇವರನ್ನು ಅಮಾನತು ಮಾಡಿದೆ. ಕಾಂಗ್ರೆಸ್ ಬ್ಲೋಕ್ ಸಮಿತಿ ಕಾರ್ಯದರ್ಶಿ ಜೆ.ಎಸ್. ರಾಧಾಕೃಷ್ಣ ನಾಯಕ್ರೊಂದಿಗಿನ ಸಾಮಾಜಿಕ ಜಾಲತಾಣದ ಪೋಸ್ಟ್ ಮಹೇಶ್ ಭಟ್ರ ವಿರುದ್ಧ ಕ್ರಮ ಕೈಗೊಳ್ಳಲು ಕಾರಣವೆಂದು ತಿಳಿದು ಬಂದಿದೆ. ೧ ತಿಂಗಳ ಹಿಂದೆ ಇವರಿಬ್ಬರೂ ಪಂಚಾಯತ್ ಕಚೇರಿಯಲ್ಲಿ ಸೆಲ್ಫಿ ತೆಗೆದಿದ್ದರು. ಈ ಚಿತ್ರವನ್ನು ಅಡಿಬರಹದೊಂದಿಗೆ ರಾಧಾಕೃಷ್ಣ ನಾಯಕ್ ಪೋಸ್ಟ್ ಮಾಡಿದ್ದರು. ಇದು ವಿವಾದವಾದ ಹಿನ್ನೆಲೆಯಲ್ಲಿ ಬಹಿರಂಗ ಹೇಳಿಕೆ ಹೊರಡಿಸಲು ಬಿಜೆಪಿ ಆಗ್ರಹಿಸಿದ್ದರೂ ಮಹೇಶ್ ಅದಕ್ಕೆ ಸಿದ್ಧರಾಗಿರಲಿಲ್ಲ.
ಬಿಜೆಪಿ ಪಂಚಾಯತ್ ಸಮಿತಿ ನೀಡಿದ ಕಾರಣ ತಿಳಿಸಲಿರುವ ನೋಟೀಸ್ಗೂ ಉತ್ತರ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಪಕ್ಷ ಶಿಸ್ತುಕ್ರಮ ಕೈಗೊಂಡಿದೆ. ಪ್ರಾಥಮಿಕ ಸದಸ್ಯತ್ವದಿಂದ ಬಿಜೆಪಿ ಅಮಾನತು ಮಾಡಿದ ಮಹೇಶ್ ಭಟ್ ಕಾಂಗ್ರೆಸ್ಗೆ ಸೇರಲು ಸಾಧ್ಯತೆ ಇದೆ ಎನ್ನಲಾಗಿದೆ.