ಕಾಞಂಗಾಡ್‌ನಲ್ಲಿ ವಿಷ ಹೊಗೆ: ನಗರಸಭಾ ಕಚೇರಿಗೆ ಯುಡಿಎಫ್ ಮಾರ್ಚ್; 50 ಮಂದಿ ವಿರುದ್ಧ ಕೇಸು
ಹೊಸದುರ್ಗ: ಜನರೇಟರ್‌ನಿಂದ ಹೊರ ಸೂಸಿದ ಹೊಗೆಯನ್ನು ಉಸಿರಾಡಿ ಹೊಸದುರ್ಗ ಲಿಟಲ್‌ಫ್ಲವರ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳಿಗೆ ಅಸ್ವಸ್ಥತೆ ಉಂಟಾದ ಘಟನೆಯನ್ನು ಪ್ರತಿಭಟಿಸಿ ಕಾಞಂಗಾಡ್ ನಗರಸಭೆ ಕಚೇರಿಗೆ ಮಾರ್ಚ್ ನಡೆಸಿದ 50ರಷ್ಟು ಮಂದಿ ಯುಡಿಎಫ್ ಕಾರ್ಯಕರ್ತರ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಯುಡಿಎಫ್ ನೇತಾರರಾದ ಬಶೀರ್ ವೆಳ್ಳಿಕೋತ್, ಬಿ.ಪಿ. ಪ್ರದೀಪ್ ಕುಮಾರ್, ಎಂ.ಪಿ. ಜಾಫರ್, ಪಿ.ವಿ. ಸುರೇಶ್, ಬದರುದ್ದೀನ್, ಹಾರಿಸ್ ಸಹಿತ ಕಂಡರೆ ಪತ್ತೆಹಚ್ಚಬಹುದಾದ ಇತರ ೪೪ ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಮಾರ್ಚ್‌ನಿರತರು ನಗರಸಭಾ ಕಚೇರಿಯ ಮುಂಭಾಗದ ಗಾಜಿನ ಬಾಗಿಲನ್ನು ಮುರಿದಿರುವುದಾಗಿ ಕೇಸು ದಾಖಲಿಸಲಾಗಿದೆ. ನಿನ್ನೆ ಮಧ್ಯಾಹ್ನ ಬಳಿಕ ಈ ಘಟನೆ ನಡೆದಿದೆ. ನಗರಸಭಾ ಕಾರ್ಯದರ್ಶಿಯ ದೂರಿನಂತೆ ಕೇಸು ದಾಖಲಿಸಲಾಗಿದೆ.