ಕಾಞಂಗಾಡ್‌ನಲ್ಲಿ ವಿಷ ಹೊಗೆ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ: ತನಿಖೆಗೆ ಜಿಲ್ಲಾಧಿಕಾರಿ ಆದೇಶ
ಹೊಸದುರ್ಗ: ಕಾಞಂಗಾಡ್ ಶಾಲೆ ಸಮೀಪದ ಆಸ್ಪತ್ರೆಯ ಜನರೇಟರ್‌ನಿಂದ ಹೊರ ಸೂಸಿದ ಹೊಗೆಯನ್ನು ಉಸಿರಾಡಿ ೩೮ ಮಂದಿ ಶಾಲಾ ವಿದ್ಯಾರ್ಥಿಗಳಿಗೆ ಅಸ್ವಸ್ಥತೆ ಉಂಟಾದ ಘಟನೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ಕೆ.ಇಂಬಶೇಖರ್ ತನಿಖೆಗೆ ಆದೇಶಿಸಿದ್ದಾರೆ. ಘಟನೆಗೆ ಸಂಬಂಧಿಸಿ ಕಾಞಂಗಾಡ್ ಸಬ್ ಕಲೆಕ್ಟರ್ ತನಿಖೆ ನಡೆಸಿ ವರದಿ ಸಲ್ಲಿಸಬೇಕಾಗಿದೆ. ಮಹಿಳೆಯರ ಹಾಗೂ ಮಕ್ಕಳ ಆಸ್ಪತ್ರೆಯ ಜನರೇಟರ್‌ನಿಂದ ಹೊರ ಸೂಸಿದ ಹೊಗೆಯನ್ನು ಉಸಿರಾಡಿದ ಸಮೀಪದ ಲಿಟ್ಲ್‌ಫ್ಲವರ್ ಶಾಲೆಯ ವಿದ್ಯಾರ್ಥಿಗಳಿಗೆ ಅಸ್ವಸ್ಥತೆ ಉಂಟಾಗಿತ್ತು.
ಉಸಿರಾಟಕ್ಕೆ ತೊಂದರೆ ಹಾಗೂ ತಲೆಸುತ್ತುವಿಕೆ ಅನುಭವಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಅಸ್ವಸ್ಥತೆ ಉಂಟಾದ ೫೦ ಮಂದಿ ಮಕ್ಕಳ ಪೈಕಿ ಐದು ಮಂದಿಯನ್ನು ಜಿಲ್ಲಾಸ್ಪತ್ರೆ ಯಲ್ಲಿ, ೧೩ ಮಂದಿಯನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇತರರಿಗೆ ಪ್ರಥಮ ಚಿಕಿತ್ಸೆ ನೀಡಿ ಬಿಡುಗಡೆಗೊಳಿಸಲಾಯಿತು. ಘಟನೆಯ ಕುರಿತು ಅವಲೋಕನ ನಡೆಸಲು ಸಬ್ ಕಲೆಕ್ಟರ್ ಸೂಪಿಯಾನ್ ಅಹಮ್ಮದ್ ಸ್ಥಳಕ್ಕೆ ತಲುಪಿದ್ದರು. ಜನಸಂದಣಿಯುಳ್ಳ ಪ್ರದೇಶದಲ್ಲಿ ಜನರೇಟರ್ ಅವೈಜ್ಞಾನಿಕ ರೀತಿಯಲ್ಲಿ ಸ್ಥಾಪಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಅಂದಾಜಿಸಲಾಗಿದೆ.