ಕಾಡುಪ್ರಾಣಿಗಳ ಉಪಟಳ : ಸಂಸದರ ಉಪವಾಸ ಸಮಾಪ್ತಿ
ಬೋವಿಕಾನ: ವನ್ಯಮೃಗ ಹಾವಳಿಯಿಂದ ಜನಸಾಮಾನ್ಯರು ಸಂಕಷ್ಟಪಡುತ್ತಿದ್ದು, ಸರಕಾರ ಸೂಕ್ತ ಕ್ರಮ ಕೂಡಲೇ ಕೈಗೊಳ್ಳಬೇಕೆಂದು ಆಗ್ರಹಿಸಿ 12 ಗಂಟೆಗಳ ಕಾಲ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ನಡೆಸಿದ ಉಪವಾಸ ಮುಷ್ಕರ ಸಮಾಪ್ತಿಯಾಯಿತು. ಉಪವಾಸದ ಸಮಾರೋಪವನ್ನು ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದರು. ಅವರು ಮಾತನಾಡಿ, ಕಾಡು ಪ್ರಾಣಿಗಳು ಕೃಷಿ ಬೆಳೆಗಳನ್ನು ನಾಶಪಡಿಸಿ ಮನುಷ್ಯ ಜೀವಕ್ಕೂ ಬೆದರಿಕೆ ಸೃಷ್ಟಿಸುತ್ತಿರುವ ಸನ್ನಿವೇಶದಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಮೌನ ನಿಲುವು ವಹಿಸಿದ್ದು, ಇದು ಅತ್ಯಂತ ಪ್ರತಿಭಟನಾರ್ಹವಾಗಿದೆ ಎಂದು ನುಡಿದರು. ಯುಡಿಎಫ್ ಆಡಳಿತಕಾಲದಲ್ಲಿ ಅರಣ್ಯ ಇಲಾಖೆಯ ಸಚಿವ ಎಂಬ ನೆಲೆಯಲ್ಲಿ ಕಾಡು ಪ್ರಾಣಿಗಳ ಉಪಟಳ ತಡೆಯಲು ಸೂಕ್ತ ಕ್ರಿಯಾ ಯೋಜನೆಗಳನ್ನು ಆವಿಷ್ಕರಿಸಿರುವು ದಾಗಿ ಅವರು ನುಡಿದರು. ಉಪವಾಸನಿರತ ಸಂಸದರಿಗೆ ಲಿಂಬೆ ಜ್ಯೂಸ್ ನೀಡಿ ಉಪವಾಸವನ್ನು ಕೊನೆಗೊಳಿಸಲಾಯಿತು. ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಅಧ್ಯಕ್ಷತೆ ವಹಿಸಿದರು. ಹಲವು ಮುಖಂಡರು ಭಾಗವಹಿಸಿದರು.