ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿ ವಂಚನೆ: ಸಮಗ್ರ ತನಿಖೆಗೆ ಪಿ.ಕೆ. ಫೈಸಲ್ ಆಗ್ರಹ
ಕಾಸರಗೋಡು: ಸಹಕಾರಿ ಸಂಸ್ಥೆಗಳ ವಿಶ್ವಾಸವನ್ನೇ ಹಾನಿಗೊಳಿಸುವ ರೀತಿಯಲ್ಲಿ ಸಿಪಿಎಂ ನಿಯಂತ್ರಣದಲ್ಲಿ ರುವ ಸಂಘದಲ್ಲಿ ನಡೆದ ಕೋಟ್ಯಂತರ ರೂ.ಗಳ ವಂಚನೆ ಸಂಬಂಧಿಸಿ ಸಮಗ್ರ ವಾದ ತನಿಖೆ ನಡೆಸಬೇಕೆಂದು ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಆಗ್ರಹಿಸಿದರು. ಅಡವು ಚಿನ್ನಾಭರಣವಿಲ್ಲದೆ ಸಂಬಂಧಿಕರ ಹಾಗೂ ಇತರರ ಹೆಸರಲ್ಲಿ ಲಕ್ಷಾಂತರ ಸಾಲ ಪಡೆದ ಘಟನೆ ಗಂಭೀರ ವಿಷಯವಾಗಿದೆ. ಜನವರಿಯಿಂದಲೇ ಈ ಸಂಸ್ಥೆಯಲ್ಲಿ ವಂಚನೆ ನಡೆದಿರು ವುದಾಗಿ ಸಹಕಾರಿ ಇಲಾಖೆಯ ವರದಿಯಲ್ಲಿ ಸ್ಪಷ್ಟವಾಗಿದೆ. ಮೂರು ತಿಂಗಳಿಗೊಮ್ಮೆ ಅಡವು ಚಿನ್ನಾಭರಣ ಗಳನ್ನು ಪರಿಶೀಲಿಸಿ ವರದಿ ಸಮರ್ಪಿಸಬೇಕಾಗಿದೆ. ಮಾರ್ಚ್ ಕೊನೆಯಲ್ಲಿ ಅಡವಿರಿಸಿದ ಚಿನ್ನಾಭರಣ ಪೂರ್ಣವಾಗಿ ಇದೆ ಎಂದು ಸ್ಪಷ್ಟಪಡಿಸಿ ಸಿಪಿಎಂ ಲೋಕಲ್ ಕಾರ್ಯದರ್ಶಿ ಯಾಗಿರುವ ಸಂಘದ ಅಧ್ಯಕ್ಷ ಸೂಪಿ ಸಹಿ ಹಾಕಿ ಸಹಕಾರಿ ಇಲಾಖೆಗೆ ವರದಿ ನೀಡಿದ್ದಾರೆ. ಸಂಸ್ಥೆಯ ಅಧ್ಯಕ್ಷ, ಆಡಳಿತ ಸಮಿತಿ, ನೌಕರರ ಅರಿವಿನಲ್ಲೇ ಈ ವಂಚನೆ ನಡೆಸಿರುವುದೆಂದು ಇದರಿಂದ ಸ್ಪಷ್ಟವಾಗಿದೆ ಎಂದು ಫೈಸಲ್ ತಿಳಿಸಿದ್ದಾರೆ.
ಆಡಳಿತ ಸಮಿತಿ ಸದಸ್ಯರ, ನೌಕರರ ಒಪ್ಪಿಗೆಯಿಲ್ಲದೆ ಸೆಕ್ರೆಟರಿ ಕೆ. ರತೀಶನ್ 4.76 ಕೋಟಿ ರೂ.ಗಳ ಚಿನ್ನಾಭರಣ ವಂಚನೆ ನಡೆಸಿರುವುದಾಗಿ ನಂಬುವುದು ಕಷ್ಟವೆಂದು ಅವರು ತಿಳಿಸಿದ್ದಾರೆ. ಇದೇ ರೀತಿ ಸಿಪಿಎಂ ನಿಯಂತ್ರಣದಲ್ಲಿರುವ ದೇಲಂಪಾಡಿ ಸೇವಾ ಸಹಕಾರಿ ಬ್ಯಾಂಕ್ ಆಡಳಿತ ಸಮಿತಿ ಕೋಟ್ಯಂತರ ರೂ.ಗಳ ವಂಚನೆ ನಡೆಸಿಯೂ ಸಿಪಿಎಂ ಪಕ್ಷ ಹಾಗೂ ಸಹಕಾರಿ ಇಲಾಖೆ ಅಧಿಕಾರಿಗಳು ಇದನ್ನು ಮುಚ್ಚಿಟ್ಟಿರು ವುದಾಗಿಯೂ ಅವರು ಆರೋಪಿಸಿದರು. ಈ ರೀತಿ ನಡೆಯುತ್ತಿರುವ ವಂಚನೆ ವಿರುದ್ಧ ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಕಾನೂನಿನ ಎದುರಲ್ಲಿ ತರಬೇಕೆಂದು ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಆಗ್ರಹಿಸಿದ್ದಾರೆ.