ಕಾರಡ್ಕ ಶಾಲೆಯಲ್ಲಿ ಜಿಲ್ಲಾ ಕಲೋತ್ಸವಕ್ಕೆ ಸಿದ್ಧತೆ : ಬಸ್ ಸೌಕರ್ಯ ಕೊರತೆ ಪರಿಹರಿಸಲು ಆಗ್ರಹ

ಮುಳ್ಳೇರಿಯ: ಜಿಲ್ಲಾ ಶಾಲಾ ಕಲೋತ್ಸವಕ್ಕೆ ಕಾರಡ್ಕದಲ್ಲಿ ಸಿದ್ಧತೆ ಭರದಿಂದ ನಡೆಯುತ್ತಿದ್ದು, ಆದರೆ ಪ್ರಯಾಣ ಸೌಕರ್ಯದ ಕೊರತೆ ಸಮಸ್ಯೆಯಾಗಬಹುದೆಂದು ಭೀತಿ ಪಡಲಾಗಿದೆ. ಕಾರಡ್ಕ ವೊಕೇಶನಲ್ ಶಾಲೆಗೆ ಕಲೋತ್ಸವಕ್ಕಾಗಿ  ಜಿಲ್ಲೆಯ ವಿವಿಧ ಕಡೆಗಳಿಂದ ಸುಮಾರು ೫೦ ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಇವರಿಗೆ ಶಾಲೆಗೆ ತಲುಪಲು, ಶಾಲೆಯಿಂದ ರಾತ್ರಿ ವೇಳೆ ಹಿಂತಿರುಗಲು ಬಸ್ ಸೌಕರ್ಯದ ಕೊರತೆ ಕಂಡು ಬರಬಹುದೆಂದು ಸಂಬಂಧಪಟ್ಟವರು ಆತಂಕ ವ್ಯಕ್ತಪಡಿಸಿದ್ದಾರೆ.

ಶಾಲೆಗೆ ತಲುಪಲು ನೆಲ್ಲಿಕಟ್ಟೆ ಮುಳ್ಳೇರಿಯ ರಸ್ತೆ ಸೂಕ್ತವಾಗಿದ್ದು, ಆದರೆ ಈ ರೂಟ್‌ನಲ್ಲಿ ಬಸ್ ಸೌಕರ್ಯ ಸೀಮಿತವಾಗಿದೆ. ಸಂಜೆಯ ಬಳಿಕ ಈ ದಾರಿಯಾಗಿ ಕಾಸರಗೋಡು ಭಾಗಕ್ಕೆ ಬಸ್ ಸಂಚಾರವಿಲ್ಲ. ಅಲ್ಲದೆ ಬೆಳಗ್ಗಿನ ಹೊತ್ತು ಮುಳ್ಳೇರಿಯ ಭಾಗಕ್ಕೆ ಬಸ್ ಸೌಕರ್ಯ ಕಡಿಮೆ ಇದೆ. ಗಂಟೆಗೊಂದು ಬಸ್ ಸಂಚರಿಸುವ ಈ ದಾರಿಯಲ್ಲಿ ಈಗಲೇ ಜನದಟ್ಟಣೆ ಇರುತ್ತದೆ. ಕಲೋತ್ಸವ ಸಂದರ್ಭದಲ್ಲಿ ಜನರು ಹೆಚ್ಚಾಗಲಿದ್ದು, ಹೆಚ್ಚುವರಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಲಾಗಿದೆ.

ಜಾಲ್ಸೂರು ರಸ್ತೆಯ ಹದಿಮೂರನೇ ಮೈಲುಕಲ್ಲಿನಲ್ಲಿ ಇಳಿದು ಶಾಲೆಗೆ ತೆರಳಬಹುದಾಗಿದ್ದರೂ ಸುಮಾರು ಒಂದು ಕಿಲೋ ಮೀಟರ್ ಹೆಚ್ಚು ನಡೆದುಕೊಂಡು ಹೋಗಬೇಕಾಗಿದೆ. ಅಲ್ಲದೆ ಸಂಜೆಯ ಬಳಿಕ ಚೆರ್ಕಳ ಬೋವಿಕ್ಕಾನ ಮುಳ್ಳೇರಿಯ ರೂಟ್‌ನಲ್ಲೂ ಬಸ್ ಸಂಚಾರ ಕಡಿಮೆ ಇದೆ. ಕಲೋತ್ಸವದ ಸ್ಪರ್ಧೆಗಳು ರಾತ್ರಿ ವಿಳಂಬವಾಗಿ ಕೊನೆಗೊಂಡಾಗ ತಮ್ಮ ಮನೆಗೆ ತೆರಳಲು ಬಸ್‌ನ ಕೊರತೆ ಸಮಸ್ಯೆಯಾಗಬಹುದಾಗಿದ್ದು, ಇದನ್ನು ಪರಿಹರಿಸಲು ಈ ದಾರಿಯಲ್ಲೂ ಹೆಚ್ಚು ವರಿ ಬಸ್ ಸಂಚಾರ ಆರಂಭಿಸಬೇಕೆಂದು ಕಲೋತ್ಸವ ಸಂಘಟಕರು ಆಗ್ರಹಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ನೀಡಲು ತೀರ್ಮಾನಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page