ಕಾರಡ್ಕ ಸಹಕಾರಿ ಸಂಘದಲ್ಲಿ ನಡೆದ ವಂಚನೆ ಪ್ರಕರಣ: ಹೊರ ರಾಜ್ಯದ ಹವಾಲಾ ತಂಡದವರೂ ಭಾಗಿ ; ಇನ್ನಷ್ಟು ಮಂದಿ ಆರೋಪಿಗಳು ಸೇರ್ಪಡೆ ಸಾಧ್ಯತೆ

ಕಾಸರಗೋಡು: ಕಾರಡ್ಕ ಅಗ್ರಿಕಲ್ಚ ರಿಸ್ಟ್ ವೆಲ್ಫೇರ್ ಕೋಆಪರೇಟಿವ್ ಸೊಸೈಟಿಯಲ್ಲಿ ನಡೆದ 4.76 ಕೋಟಿ ರೂ.ಗಳ ವಂಚನೆ ಪ್ರಕರಣದಲ್ಲಿ ಹೊರ ರಾಜ್ಯಗಳ ಹವಾಲಾ ತಂಡದವರೂ ಶಾಮೀಲಾಗಿರುವ ಬಗ್ಗೆ ತನಿಖಾ ತಂಡಕ್ಕೆ ಮಾಹಿತಿ ಲಭಿಸಿದೆ. ಆದ್ದರಿಂದ ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಆರೋಪಿಗಳು ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ಈ ಸಹಕಾರಿ ಸಂಘದಲ್ಲಿ ವಂಚನೆ ಪಡೆದ ಹಣವನ್ನು ಹವಾಲಾ ವ್ಯವಹಾರಕ್ಕಾಗಿ  ಬಳಸಿರುವ ಬಗ್ಗೆ ತನಿಖಾ ತಂಡಕ್ಕೆ ಆರಂಭದಲ್ಲೇ ಮಾಹಿತಿ ಲಭಿಸಿತ್ತು. ಆ ಬಗ್ಗೆ ನಡೆಸಲಾದ ಹೆಚ್ಚಿನ ತನಿಖೆಯಲ್ಲಿ ಇದರಲ್ಲಿ ಹೊರ ರಾಜ್ಯಗಳ ಹವಾಲಾ ತಂಡದ ಕೊಂಡಿಗಳೂ ಭಾಗಿಯಾಗಿರುವ ಬಗ್ಗೆ ತನಿಖಾ ತಂಡಕ್ಕೆ ಈಗ ಸುಳಿವು ಲಭಿಸಿದೆ. ಅದರ ಜಾಡು ಹಿಡಿದು ಪೊಲೀಸರು ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ. ಈ ವಂಚನೆ ಪ್ರಕರಣದ ಬಗ್ಗೆ ಮೊದಲು ಆದೂರು ಪೊಲೀಸರು ತನಿಖೆ ನಡೆಸುತ್ತಿದ್ದರು. ಅನಂತರ ತನಿಖೆಯನ್ನು ಜಿಲ್ಲಾ ಕ್ರೈಂ ಬ್ರಾಂಚ್‌ಗೆ ಹಸ್ತಾಂತರಿಸಲಾಗಿತ್ತು. ಪ್ರಕರಮದ ತನಿಖೆಯನ್ನು ಈಗ ರಾಜ್ಯ ಕ್ರೈಂಬ್ರಾಂಚ್‌ಗೆ ಹಸ್ತಾಂತರಿಸಲಾಗಿದೆ.

ಈ ಪ್ರಕರಣಕ್ಕೆ ಬಂಧಿತರಾದವರ ಪೈಕಿ ಇಬ್ಬರನ್ನು ತನಿಖಾ ತಂಡ ನ್ಯಾಯಾಂಗ ಬಂಧನದಿಂದ ಮತ್ತೆ ತಮ್ಮ ಕಸ್ಟಡಿಗೆ ಪಡೆದು ಅವರನ್ನು ತೀವ್ರವಾಗಿ ವಿಚಾರಣೆಗೊಳಪಡಿ ಸಿದಾಗ ಈ ವಂಚನಾ ಜಾಲದಲ್ಲಿ ಹೊರ ರಾಜ್ಯದ ಹವಾಲಾ ತಂಡದವರು ಸೇರಿದಂತೆ ಇತರ ಹಲವು ತಿಮಿಂಗಿಲಗಳು ಶಾಮೀಲಾಗಿವೆ ಎಂಬ ಸ್ಪಷ್ಟ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ. ಅದರಿಂದ ಈ ಪ್ರಕರಣದ ತನಿಖೆಯನ್ನು ಹೊರ ರಾಜ್ಯಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

You cannot copy content of this page