ಕಾರಡ್ಕ ಸೊಸೈಟಿ ವಂಚನೆ: ಕೇಂದ್ರ ಇಂಟೆಲಿಜೆನ್ಸ್ ಏಜೆನ್ಸಿಗಳಿಂದ ತನಿಖೆ
ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋಪರೇಟಿವ್ ಸೊಸೈಟಿಯಲ್ಲಿ ನಡೆದ 4.76 ಕೋಟಿ ರೂಪಾಯಿಗಳ ವಂಚನೆ ಪ್ರಕರಣದಲ್ಲಿ ಆರೋಪಿಗಳಿಗೆ ವಿದೇಶ ನಂಟು ಇದೆಯೆಂಬ ಸೂಚನೆಗಳು ಬಹಿರಂಗಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಇಂಟೆಲಿಜೆನ್ಸ್ ಏಜೆನ್ಸಿಗಳು ತನಿಖೆ ಆರಂಭಿಸಿರುವುದಾಗಿ ಸೂಚನೆಯಿದೆ. ಆರೋಪಿಗಳು ನೀಡಿದ ಹೇಳಿಕೆಗಳ ಕುರಿತು ಐ.ಬಿ. ಅಧಿಕಾರಿಗಳು ಮಾಹಿತಿ ಕೇಳಿದ್ದಾರೆ. ಸೆರೆಗೀಡಾದ ಆರೋಪಿಗಳಲ್ಲಿ ಓರ್ವನಾದ ಕಲ್ಲಿಕೋಟೆ ರಾಮನಾಟುಕರದ ನಬಿಲ್ ಎಂಬಾತನ ಇ ಮೇಲ್‌ಗೆ ಪಾಕಿಸ್ತಾನದಿಂದ ಸಂದೇಶ ಬಂದಿರುವುದಾಗಿ ಲಭಿಸಿದ ಸೂಚನೆಯ ಆಧಾರದಲ್ಲಿ ಐ.ಬಿ. ತನಿಖೆ ಆರಂಭಿಸಿದೆ. ಆರೋಪಿಗಳಲ್ಲೋರ್ವನಾದ ಕಲ್ಲಿಕೋಟೆಯ ನಬೀಲ್ ರಾಷ್ಟ್ರೀಯ ತನಿಖಾ ಏಜೆನ್ಸಿ ಅಧಿಕಾರಿಗಳು ಬಳಸುವ ಓರ್ವ ಕೋಟ್‌ನ ನಕಲಿ ಸಮವಸ್ತ್ರ ಉಪಯೋಗಿಸಿರುವ ಬಗ್ಗೆಯೂ ತಿಳಿದು ಬಂದಿರುವುದನ್ನು ಕೇಂದ್ರ ತನಿಖಾ ಏಜೆನ್ಸಿಗಳು ಗಂಭೀರವಾಗಿ ಪರಿಗಣಿಸಿವೆ ಎಂದು ತಿಳಿದು ಬಂದಿದೆ.
ಇದೇ ವೇಳೆ ಸೊಸೈಟಿಯಿಂದ ಲಪಟಾಯಿಸಿದ ಕೋಟ್ಯಂತರ ರೂಪಾಯಿಗಳನ್ನು ಯಾವ ಅಗತ್ಯಕ್ಕೆ ಬಳಸಲಾಗಿದೆ ಎಂಬ ಬಗ್ಗೆ ಇನ್ನೂ ಉತ್ತರ ಕಂಡುಕೊಳ್ಳಲಾಗಿಲ್ಲ. ಈ ಕುರಿತಾಗಿಯೂ ತನಿಖೆ ನಡೆಸಲು ತನಿಖಾ ತಂಡ ಕ್ರಮ ಆರಂಭಿಸಿದೆ. ಸೊಸೈಟಿಯಲ್ಲಿ ನಡೆದ ವಂಚನೆಗೆ ಸಂಬಂಧಿಸಿ ಸೆಕ್ರೆಟರಿ ಕರ್ಮಂತೋಡಿ ಬಾಳಕಂಡದ ಕೆ. ರತೀಶನ್ ಸಹಿತ ಒಟ್ಟು ಆರು ಮಂದಿ ಇದುವರೆಗೆ ಸೆರೆಗೀಡಾಗಿದ್ದಾರೆ.