ಕಾರಡ್ಕ ಸೊಸೈಟಿ ವಂಚನೆ ಪ್ರಕರಣ: ಮತ್ತೆ 160 ಗ್ರಾಂ ಚಿನ್ನ ವಶ
ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚ ರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿಯಿಂದ ಲಪಟಾಯಿಸಿದ ಚಿನ್ನಾಭರಣಗಳ ಪೈಕಿ ಮತ್ತೆ 160 ಗ್ರಾಂ ಚಿನ್ನವನ್ನು ವಶಪಡಿಸಲಾಗಿದೆ. ಪೆರಿಯದ ಸೊಸೈಟಿಯೊಂದರಲ್ಲಿ ಅಡವಿರಿಸಿದ ಚಿನ್ನವನ್ನು ರಾಜ್ಯ ಕ್ರೈಂ ಬ್ರಾಂಚ್‌ನ ಆರ್ಥಿಕ ಅಪರಾಧ ಪತ್ತೆ ವಿಭಾಗದ ಇನ್‌ಸ್ಪೆಕ್ಟರ್ ಅನೀಶ್‌ರ ನೇತೃತ್ವದಲ್ಲಿ ವಶಪಡಿಸಲಾಗಿದೆ. ಸೊಸೈಟಿಯಿಂದ ಲಪಟಾಯಿಸಿದ ಚಿನ್ನದ ಪೈಕಿ 63 ಪವನ್ ಚಿನ್ನವನ್ನು ಪೆರಿಯದ ಬ್ಯಾಂಕೊಂದರಲ್ಲಿ ಅಡವಿರಿಸಿರುವು ದಾಗಿಯೂ ಕ್ರೈಂ ಬ್ರಾಂಚ್ ತನಿಖೆಯಲ್ಲಿ ತಿಳಿದುಬಂದಿದೆ. ಈ ಚಿನ್ನವನ್ನು ವಶಪಡಿಸಲಿರುವ ಕ್ರಮವನ್ನು ತನಿಖಾ ತಂಡ ಆರಂಭಿಸಿದೆ. ಸೊಸೈಟಿಯಲ್ಲಿ 4.76 ಕೋಟಿ ರೂಪಾಯಿಗಳ ವಂಚನೆ ನಡೆದಿದೆ. ಮೇ 14ರಂದು ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ನಡೆದ ವಂಚನೆಗೆ ಸಂಬಂಧಿಸಿದ ಮಾಹಿತಿಗಳು ಮೊದಲಿಗೆ ಬೆಳಕಿಗೆ ಬಂದಿದೆ. ಮೊದಲು ಆದೂರು ಪೊಲೀಸರು ನಂತರ ಜಿಲ್ಲಾ ಕ್ರೈಂ ಬ್ರಾಂಚ್ ತನಿಖೆ ನಡೆಸಿದ ಈ ಪ್ರಕರಣವನ್ನು ಈಗ ಕಣ್ಣೂರು ಕ್ರೈಂ ಬ್ರಾಂಚ್‌ನ ಅಪರಾಧ ಪತ್ತೆ ವಿಭಾಗ ತನಿಖೆ ನಡೆಸುತ್ತಿದೆ. ಭಾರೀ ಕೋಲಾಹಲಗಳಿಗೆ ಕಾರಣವಾದ ವಂಚನೆ ಪ್ರಕರಣದ ಮುಖ್ಯ ಆರೋಪಿ ಕರ್ಮಂತ್ತೋಡಿ ಬಾಳಕಂಡದ ಕೆ. ರತೀಶ್ ಮಾತ್ರವೇ ಈಗ ರಿಮಾಂಡ್‌ನಲ್ಲಿದ್ದಾನೆ. ರತೀಶ್ ಸೊಸೈಟಿಯ ಸೆಕ್ರೆಟರಿ ಹಾಗೂ ಸಿಪಿಎಂ ಲೋಕಲ್ ಕಮಿಟಿ ಸದಸ್ಯ ನೂ ಆಗಿದ್ದನು. ಇತರ ಆರೋಪಿಗಳಾದ ಬೇಕಲ ಹದ್ದಾದ್‌ನಗರದ ಮೊಹಮ್ಮದ್ ಬಷೀರ್, ಈತನ ಚಾಲಕ ಅಂಬಲತ್ತರ ಏಳನೇ ಮೈಲಿನ ಅಬ್ದುಲ್ ಗಫೂರ್, ಪಯ್ಯನ್ನೂರಿನಲ್ಲಿ ವಾಸಿಸುವ ಕಣ್ಣೂರು ನಿವಾಸಿ ಅಬ್ದುಲ್ ಜಬ್ಬಾರ್, ಕಲ್ಲಿಕೋಟೆ ಅರಕ್ಕಿಣಾರ್ ನಿವಾಸಿ ನಬೀಲ್, ನೆಲ್ಲಿಕ್ಕಾಡ್‌ನ ಅನಿಲ್ ಕುಮಾರ್ ಎಂಬಿವರಿಗೆ ಜಾಮೀನು ಲಭಿಸಿದೆ.