ಕಾರಿನಲ್ಲಿ ಪರಾರಿಯಾದ ಆರೋಪಿಯನ್ನು ರಸ್ತೆಗೆ ಅಡ್ಡವಾಗಿ ಪೊಲೀಸ್ ವಾಹನ ನಿಲ್ಲಿಸಿ ಸೆರೆ
ಹೊಸದುರ್ಗ: ಪೊಲೀಸರ ಕಣ್ತಪ್ಪಿಸಿ ಸುತ್ತಾಡುತ್ತಿದ್ದ ಮಾದಕವಸ್ತು ಮಾರಾಟದ ಸೂತ್ರಧಾರನನ್ನು ಪೊಲೀಸ್ ವಾಹನವನ್ನು ರಸ್ತೆಗೆ ಅಡ್ಡವಾಗಿರಿಸಿ ಸೆರೆಹಿಡಿಯಲಾಗಿದೆ. ಪಡನ್ನಕ್ಕಾಡ್ ಞಾಣಿಕಡವ್ ಅಫ್ಸಲ್ ಮಂಜಿಲ್‌ನ ಅರ್ಶಾದ್ (೩೩) ಎಂಬಾತನನ್ನು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ತಂಡ ಸೆರೆಹಿಡಿದಿದೆ. ಈತನ ಕೈಯಿಂದ ೨೭ ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದು, ಆತನ ಕಾರನ್ನು ಕಸ್ಟಡಿಗೆ ತೆಗೆಯಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ನಿರ್ದೇಶ ಪ್ರಕಾರ ಈತನ ಬಂಧನ ನಡೆದಿದೆ. ಇನ್‌ಸ್ಪೆಕ್ಟರ್ ಕೆ.ಪಿ. ಶಾನು, ಎಸ್‌ಐ ಕೆ.ಪಿ. ಸತೀಶನ್ ಈ ಕಾರ್ಯಾಚರಣೆ ನಡೆಸಿದ್ದಾರೆ.
ಅರ್ಶಾದ್ ಕಾರಿನಲ್ಲಿ ಮಾದಕವಸ್ತು ಸಾಗಿಸುತ್ತಿದ್ದಾನೆಂಬ ಬಗ್ಗೆ ಲಭಿಸಿದ ಗುಪ್ತ ಮಾಹಿತಿಯ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಅರ್ಶಾದ್ ಸಂಚರಿಸುತ್ತಿದ್ದ ಕಾರನ್ನು ನಿಲ್ಲಿಸುವಂತೆ ಪೊಲೀಸರು ಸೂಚನೆ ನೀಡಿದರೂ ನಿಲ್ಲಿಸದೆ ಮುಂದೆ ಸಾಗಿದೆ. ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಅದಿಂಞಾ ಲ್‌ನಿಂದ ಸೆರೆಹಿಡಿಯಲಾಗಿದೆ. ಅರ್ಶಾದ್ ಪರಾರಿಯಾಗುವ ವೇಳೆ ಬೇರೊಂದು ವಾಹನದಲ್ಲಿ ತಲುಪಿದ ಪೊಲೀಸರು ರಸ್ತೆಗೆ ಅಡ್ಡವಾಗಿ ವಾಹನವನ್ನು ನಿಲ್ಲಿಸಿದ್ದಾರೆ. ಈ ವೇಳೆ ಕಾರನ್ನು ಹಿಂದಕ್ಕೆ ಚಲಾಯಿಸಿ ಪರಾರಿಯಾಗಲು ಯತ್ನಿಸಿದರೂ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ಇದರಿಂದ ಕಾರು ಉಪೇಕ್ಷಿಸಿ ಪರಾರಿಯಾಗಲು ಆರೋಪಿ ಯತ್ನಿಸಿದ್ದು, ಅಷ್ಟರಲ್ಲಿ ಪೊಲೀಸರು ಬೆನ್ನಟ್ಟಿ ಸೆರೆಹಿಡಿದಿದ್ದಾರೆ.
ಹೊಸದುರ್ಗ, ಪಯ್ಯನ್ನೂರು ಪೊಲೀಸ್ ಠಾಣೆಗಳಲ್ಲಿ ಒಂದಕ್ಕಿಂತ ಹೆಚ್ಚು ಮಾದಕವಸ್ತು ಪ್ರಕರಣಗಳುಳ್ಳ ಅರ್ಶಾದ್‌ನನ್ನು ಕಾಪಾ ಪ್ರಕಾರ ಬಂಧಿಸಿದ್ದು, ಕಣ್ಣೂರು ಸೆಂಟ್ರಲ್ ಜೈಲ್‌ನಲ್ಲಿರಿಸಲಾಗಿತ್ತು. ಕೆಲವು ತಿಂಗಳ ಹಿಂದೆ ಬಿಡುಗಡೆಗೊಂಡ ಬಳಿಕ ಮತ್ತೆ ಮಾದಕವಸ್ತು ವ್ಯಾಪಾರಕ್ಕೆ ಈತ ತೊಡಗಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ತಂಡದಲ್ಲಿ ನೀಲೇಶ್ವರ ಇನ್‌ಸ್ಪೆಕ್ಟರ್ ಕೆ. ಪ್ರೇಂಸದನ್, ಎಸ್‌ಐ ವಿಶಾಖ್, ಪೊಲೀಸರಾದ ಗಿರೀಶ್, ದಿಲೀಪ್, ಜೋತಿಷ್, ಕಿಶೋರ್, ಶೈಜು, ಪ್ರಕಾಶ್, ಶಿಜಿತ್ ಮೊದಲಾದವರಿದ್ದರು.