ಕಾಲಹರಣಗೊಂಡ ಕಾಯ್ದೆಗಳಿಗೆ ಬದಲಾವಣೆ ತರಲಾಗುವುದು- ಎಂ.ಬಿ. ರಾಜೇಶ್
ಕಾಸರಗೋಡು: ಕಾಲಹರಣ ಗೊಂಡ ಕಾಯ್ದೆಗಳು, ಕಾನೂನುಗಳನ್ನು ಪುನರ್ ಪರಿಶೀಲಿಸುವುದಕ್ಕೆ ಸ್ಥಳೀಯಾಡಳಿತ ಅದಾಲತ್‌ನಲ್ಲಿ ಲಭಿಸಿದ ಅರ್ಜಿಗಳು ಸಹಾಯ ಕವಾಯಿತೆಂದು ಸ್ಥಳೀಯಾಡಳಿತ ಇಲಾಖೆ ಸಚಿವ ಎಂ.ಬಿ. ರಾಜೇಶ್ ನುಡಿದರು. ಕಾಸರಗೋಡು ಟೌನ್‌ಹಾಲ್‌ನಲ್ಲಿ ನಡೆದ ಅದಾಲತ್ ಉದ್ಘಾಟಿಸಿ ಅವರು ಮಾತನಾಡಿದರು. ಇದುವರೆಗೆ ನಡೆದ ಅದಾಲತ್‌ನಲ್ಲಿ ಪ್ರಮುಖವಾದ 30 ತೀರ್ಮಾನಗಳನ್ನು ಘೋಷಿಸಲಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ವಸ್ತು ತೆರಿಗೆ, ಬಾಡಿಗೆ ಉಳಿಕೆ, ಬಡ್ಡಿ ದರ ವಸೂಲು ಮಾಡುವುದನ್ನು ಕೊನೆಗೊಳಿಸಲಾಗಿದೆ. ಕಟ್ಟಡಕ್ಕೆ ಸಂಬಂಧಿಸಿ ಪಾಲಿಸಬೇಕಾದ ಷರತ್ತುಗಳನ್ನು ಪಾಲಿಸಲಾಗುತ್ತಿದ್ದರೂ ಪ್ಲೋಟ್ ಏರಿಯಾದಲ್ಲಿ ಕಡಿಮೆ ಅಥವಾ ಹೆಚ್ಚು ಆಯಿತು ಎಂಬ ಕಾರಣದಿಂದ ಪರವಾನಗಿ ರದ್ದುಗೊಳಿಸುವ ಕಾಯ್ದೆಯಲ್ಲಿ ರಿಯಾಯಿತಿ ಮಾಡಲಾಗುವುದು. ಕಾರ್ಪೊರೇಷನ್, ನಗರಸಭೆಯ ವ್ಯಾಪ್ತಿಯಲ್ಲಿ ಎರಡು ಸೆಂಟ್ಸ್ ವರೆಗಿರುವ ಭೂಮಿಯಲ್ಲಿ ನಿರ್ಮಿಸುವ 100 ಚದರ ಅಡಿ ಮೀಟರ್‌ವರೆಗಿನ ಮನೆಗಳಿಗೆ ಮುಂಭಾಗದಲ್ಲಿ ಮೂರು ಮೀಟರ್ ವರೆಗಿರುವ ದಾರಿಯಾಗಿದ್ದರೆ, ಫ್ರಂಟ್ ಯಾರ್ಡ್ ಸೆಟ್ ಬ್ಯಾಕ್ ಒಂದು ಮೀಟರ್ ಆಗಿ ಕಡಿಮೆ ಮಾಡಿಕೊಂಡು ಕಾಯ್ದೆಯಲ್ಲಿ ತಿದ್ದುಪಡಿ ತರಲಾಗುವುದು. ವಾಸಕ್ಕೆ ಸೂಕ್ತವಾದ ಬೇರೆ ಭೂಮಿ ಇಲ್ಲದ ಕುಟುಂಬಗಳಿಗೆ ಷರತ್ತುಗಳಿಗೆ ಅನ್ವಯವಾಗಿ ಈ ರಿಯಾಯಿತಿ ನೀಡಲಾಗುವುದು. 80 ಚದರ ಅಡಿ ಮೀಟರ್ ವರೆಗೆ ಇರುವ ಸ್ವಂತ ವಾಸಕ್ಕಾಗಿ ಉಪಯೋಗಿಸುವ ಮನೆಗಳಿಗೆ 2024-25 ವರೆಗಿನ ವಸ್ತು ತೆರಿಗೆ ಚಕ್ರಬಡ್ಡಿಯನ್ನು ಹೊರತುಪಡಿಸಲಾಗುವುದು. ಇವರು ಬಾಕಿ ಉಳಿಸಿಕೊಂಡ ತೆರಿಗೆ ಮಾತ್ರ ಪಾವತಿಸಿದರೆ ಸಾಕೆಂದು ಸಚಿವರು ತಿಳಿಸಿದರು.
ವೀಡಿಯೋ ಕಾನ್ಫರೆನ್ಸ್ ಮೂಲಕ ವಿವಾಹ ರಿಜಿಸ್ಟ್ರಾರ್‌ರ ಮುಂಭಾಗದಲ್ಲಿ ಹಾಜರಾಗಲಿರುವ ಸೌಕರ್ಯ ಎಲ್ಲರಿಗೂ ಲಭ್ಯಗೊಳಿಸಲು ನಿರ್ದೇಶ ನೀಡಲಾಗಿದೆ. ಪಂಚಾಯತ್‌ನಲ್ಲಿ ವಿವಾಹಿತರಾಗುವ ದಂಪತಿಯರು ಅರ್ಜಿ ನೀಡಿದರೆ ರಿಜಿಸ್ಟ್ರಾರ್‌ರ ಮುಂಭಾಗದಲ್ಲಿ ಆನ್‌ಲೈನ್ ಆಗಿ ಹಾಜರಾಗಿ ವಿವಾಹ ನೋಂದಾಯಿಸಬಹುದಾಗಿದೆ.
ಕಾರ್ಯಕ್ರಮದಲ್ಲಿ ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಇ. ಚಂದ್ರಶೇಖರನ್, ಸಿ.ಎಚ್. ಕುಂಞಂಬು, ಎಂ. ರಾಜ ಗೋಪಾಲನ್, ಕೆ. ಇಂಭಶೇಖರ್, ಅಬ್ಬಾಸ್ ಬೀಗಂ, ದೇಲಂಪಾಡಿ ಪಂ. ಅಧ್ಯಕ್ಷೆ ಎ.ಪಿ. ಉಷಾ, ಪಿ.ವಿ. ಶಾಂತ, ಎಂ. ಲಕ್ಷ್ಮಿ ಮಾತನಾಡಿ ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸ್ವಾಗತಿಸಿ, ಸ್ಥಳೀಯಾಡಳಿತ ಜೋಯಿಂಟ್ ಡೈರೆಕ್ಟರ್ ಜೈಸನ್ ಮ್ಯಾಥ್ಯು ವಂದಿಸಿದರು.