ಕಾಸರಗೋಡಿನಲ್ಲಿ ಕಳ್ಳರು ಬೀಡುಬಿಟ್ಟ ಬಗ್ಗೆ ಮಾಹಿತಿ: ಹಲವೆಡೆಗಳಲ್ಲಿ ಕಳವು
ಕಾಸರಗೋಡು: ಕಾಸರಗೋಡಿನಲ್ಲಿ ಕಳ್ಳರ ತಂಡ ಬೀಡು ಬಿಟ್ಟಿರುವ ಮಾಹಿತಿ ಪೊಲೀಸರಿಗೆ ಲಭಿಸಿದೆ. ಕಳೆದ ಎರಡು ದಿನಗಳಲ್ಲಾಗಿ ಕಾಸರಗೋಡಿನ ವಿವಿಧೆಡೆಗಳಲ್ಲಾಗಿ ಕಳವು ಹಾಗೂ ಕಳವಿಗೆತ್ನ ನಡೆದಿದೆ. ಕಾಸರಗೋಡು ನೆಲ್ಲಿಕುಂಜೆ ಜಂಕ್ಷನ್ ಬಳಿಯ ನೂರ್ ಮಸೀದಿಯ ಗೇಟು ಮುರಿದು ಒಳ ನುಗ್ಗಲೆತ್ನಿಸಿದ ಕಳ್ಳರು ಅಲ್ಲಿಂದ ಕಳವಿಗೆತ್ನಿಸಿದ್ದಾರೆ. ಮಾತ್ರವಲ್ಲ ನೆಲ್ಲಿಕುಂಜೆ ಬೀಚ್ ಮಸೀದಿ ಕಚೇರಿಯ ಬೀಗ ಒಡೆದು ಅಲ್ಲಿಂದಲೂ ಕಳವಿಗೆತ್ನಿಸಿದ್ದಾರೆ. ಈ ಬಗ್ಗೆ ಕಾಸರಗೋಡು ಪೊಲೀಸರಿಗೆ ಲಭಿಸಿದ ಮಾಹಿತಿಯಂತೆ ಪೊಲೀಸರು ಆ ಪರಿಸರದ ಸಿಸಿ ಟಿವಿ ಕ್ಯಾಮರಾಗಳನ್ನು ಕೂಲಂಕುಷವಾಗಿ ಪರಿಶೀಲಿಸತೊಡಗಿದ್ದಾರೆ.
ಉಳಿಯತ್ತಡ್ಕದ ಮಸೀದಿಗೆ ಮೊನ್ನೆ ರಾತ್ರಿ ಕಳ್ಳರು ನುಗ್ಗಿ ಅಲ್ಲಿನ ಕಾಣಿಕೆ ಡಬ್ಬಿಯನ್ನು ಅಪಹರಿಸಿದ್ದಾರೆ. ಅದರೊಳಗೆ ಎಷ್ಟು ಹಣವಿತ್ತೆಂಬ ಲೆಕ್ಕಾಚಾರ ಇನ್ನೂ ಲಭಿಸಿಲ್ಲ. ಮಾತ್ರವಲ್ಲದೆ ಉಳಿಯತ್ತಡ್ಕದ ಜಾಬೀರ್ ಎಂಬವರ ಅಂಗಡಿಗೆ ಕಳ್ಳರು ನುಗ್ಗಿ ಅಲ್ಲಿಂದ ೭,೦೦೦ ರೂ. ನಗದು ಅಪಹರಿಸಿದ್ದಾರೆ. ಮಧೂರು ಪಂಚಾಯತ್ ಕಚೇರಿ ಪಕ್ಕದ ತರಕಾರಿ ಅಂಗಡಿಯೊಂದರಿಂದಲೂ ಕಳ್ಳರು ನುಗ್ಗಿ ಅಲ್ಲಿಂದ ನಗದು ಅಪಹರಿಸಿರುವುದಾಗಿಯೂ ವಿದ್ಯಾನಗರ ಪೊಲೀಸರಿಗೆ ಮಾಹಿತಿ ಲಭಿಸಿದೆ. ಅದರಂತೆ ಪೊಲೀಸರು ನಡೆಸಿದ ತನಿಖೆಯಲ್ಲಿ ಆ ಪರಿಸರದ ಸಿಸಿ ಟಿವಿಯಲ್ಲಿ ಮಸೀದಿಗೆ ನುಗ್ಗಿದ ಕಳ್ಳ ಅಲ್ಲಿನ ಕಾಣಿಕೆ ಡಬ್ಬಿಯನ್ನು ಹೊತ್ತುಕೊಂಡು ಹೋಗುವ ದೃಶ್ಯ ಗೋಚರಿಸಿದೆ. ಆ ದೃಶ್ಯವನ್ನು ಕೇಂದ್ರೀಕರಿಸಿ ಪೊಲೀಸರು ಈಗ ಕಳ್ಳರ ಪತ್ತೆಗಾಗಿ ತೀವ್ರ ಶೋಧ ಆರಂಭಿಸಿದ್ದಾರೆ.