ಕಾಸರಗೋಡಿನಲ್ಲಿ 696 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆ ನಡೆಸಲಾಗಿದೆ-ಸಂಸದ ಉಣ್ಣಿತ್ತಾನ್
ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ 696 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳನ್ನು ಜ್ಯಾರಿಗೊಳಿಸಲಾಗಿದೆಯೆಂದು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಹೇಳಿದ್ದಾರೆ. ಪ್ರೆಸ್ ಕ್ಲಬ್‌ನಲ್ಲಿ ನಿನ್ನೆ ನಡೆದ ‘ಜನಸಭೆ’ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಅವರು ಮಾತನಾಡುತ್ತಿದ್ದರು.
ಲೋಕಸಭಾ ಕ್ಷೇತ್ರದಲ್ಲಿ ಹಲವು ರೈಲು ಅಭಿವೃದ್ಧಿ ಯೋಜನೆ ಜ್ಯಾರಿಗೊಳಿಸುವಂತೆ ಮಾಡುವಲ್ಲಿ ನಾನು ಸಕ್ರಿಯವಾಗಿ ಮಧ್ಯಸ್ಥಿಕೆ ನಡೆಸಿದ್ದೇನೆ. ನನ್ನ ಪ್ರಾದೇಶಿಕ ಅಭಿವೃದ್ಧಿ ನಿಧಿ ಮೊತ್ತವನ್ನು ಈ ಕ್ಷೇತ್ರದಲ್ಲಿ ಪೂರ್ಣ ವಾಗಿ ವಿನಿಯೋಗಿಸಿದ್ದೇನೆ ಎಂದೂ ಅವರು ಹೇಳಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಯುಡಿಎಫ್ ಸಂಸದರು ಸಂಸತ್ತ್‌ನಲ್ಲಿ ಧ್ವನಿ ಎತ್ತಿಲ್ಲವೆಂದು ಹೇಳುತ್ತಿರುವ ಮುಖ್ಯಮಂತ್ರಿಗೆ ಮರೆವು ಕಾಯಿಲೆ ತಗಲಿದಂತೆ ಭಾಸವಾಗುತ್ತದೆ. ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಯನ್ನು ಹರಿದುಹಾಕಿ ಅದರ ಹೆಸರಲ್ಲಿ ಸಂಸತ್‌ನಿಂದ ಅಮಾನತುಗೊಳಿ ಸಲ್ಪಟ್ಟ ಯುಡಿಎಫ್ ಸಂಸದರಲ್ಲಿ ನಾನೂ ಒಳಗೊಂಡಿದ್ದೆ. ಮಾತ್ರವಲ್ಲ ಆ ಕಾಯ್ದೆಯನ್ನು ಪ್ರತಿಭಟಿಸಿ ಯುಡಿಎಫ್ ಸಂಸದರು ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆದರೆ ಇದ್ಯಾವುದನ್ನೂ ಕಾಣದ ಮುಖ್ಯಮಂತ್ರಿಯವರಿಗೆ ರಾಜಕೀಯ ಅಂಧತ್ವ ತಗಲಿದೆಯೆಂದೂ ಸಂಸದರು ಆರೋಪಿಸಿದ್ದಾರೆ.